Updated on: Apr 06, 2023 | 11:09 PM
IPL 2023: ಐಪಿಎಲ್ ಶುರುವಾದ ಬೆನ್ನಲ್ಲೇ ಈ ಬಾರಿ ಕಪ್ ಗೆಲ್ಲುವ ತಂಡ ಯಾವುದು ಎಂಬ ಚರ್ಚೆ ಕೂಡ ಜೋರಾಗಿದೆ. ಈಗಾಗಲೇ ಬಹುತೇಕ ತಂಡಗಳು 2 ಪಂದ್ಯಗಳನ್ನಾಡಿದೆ. ಇದರಲ್ಲಿ ಕೆಲ ತಂಡಗಳು ಉತ್ತಮ ಪ್ರದರ್ಶನ ನೀಡಿದರೆ, ಮತ್ತೆ ಕೆಲ ತಂಡಗಳಿಂದ ನಿರೀಕ್ಷಿತ ಆಟ ಮೂಡಿಬಂದಿಲ್ಲ. ಅದರಲ್ಲೂ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ಗೆ ಸೋಲುಣಿಸಿ ಆರ್ಸಿಬಿ ಶುಭಾರಂಭ ಮಾಡಿದೆ.
ಬಲಿಷ್ಠ ಮುಂಬೈ ಇಂಡಿಯನ್ಸ್ ವಿರುದ್ಧ 8 ವಿಕೆಟ್ಗಳಿಂದ ಗೆದ್ದಿರುವ ಆರ್ಸಿಬಿ ಈ ಬಾರಿ ಕಪ್ ಗೆಲ್ಲುವ ವಿಶ್ವಾಸದಲ್ಲಿದ್ದಾರೆ ಅಭಿಮಾನಿಗಳು. ಆದರೆ ಆರ್ಸಿಬಿ ತಂಡ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ನೀಡಿರುವ ಹೇಳಿಕೆಯು ಇದೀಗ ಅಭಿಮಾನಿಗಳ ಆಶಯಕ್ಕೆ ತದ್ವಿರುದ್ಧ ಎಂಬುದೇ ಅಚ್ಚರಿ.
ಹೌದು, ಎಬಿ ಡಿವಿಲಿಯರ್ಸ್ ಪ್ರಕಾರ ಈ ಸಲ ಆರ್ಸಿಬಿ ಕಪ್ ಗೆಲ್ಲುವುದು ಅನುಮಾನ. ನನಗೂ ಆರ್ಸಿಬಿ ತಂಡ ಕಪ್ ಗೆಲ್ಲಬೇಕೆಂಬ ಆಸೆಯಿದೆ. ತಂಡ ಕೂಡ ಸಮತೋಲನದಿಂದ ಕೂಡಿದೆ. ಆದರೆ ಈ ತಂಡ ಚಾಂಪಿಯನ್ ಪಟ್ಟಕ್ಕೇರಲಿದೆ ಎಂದು ಹೇಳಲಾಗುವುದಿಲ್ಲ.
ಏಕೆಂದರೆ ಆರ್ಸಿಬಿಗಿಂತ ಉತ್ತಮ ತಂಡಗಳು ಟೂರ್ನಿಯಲ್ಲಿದೆ. ಅದರಲ್ಲೂ ಕಳೆದ ಬಾರಿಯ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡ ಮತ್ತಷ್ಟು ಬಲಿಷ್ಠವಾಗಿದೆ. ಐಪಿಎಲ್ ಹರಾಜಿನ ಸಮಯದಲ್ಲೇ ಗುಜರಾತ್ ಟೈಟಾನ್ಸ್ ತಂಡ ಕಪ್ ಗೆಲ್ಲುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದ್ದೆ.
ಈಗ ಅದೇ ಮಾತನ್ನು ಪುನರುಚ್ಚರಿಸುತ್ತಿದ್ದೇನೆ. ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವು ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆಲ್ಲಲಿದೆ ಎಂದು ಎಬಿ ಡಿವಿಲಿಯರ್ಸ್ ಭವಿಷ್ಯ ನುಡಿದಿದ್ದಾರೆ.
ಇನ್ನು ಡಿವಿಲಿಯರ್ಸ್ ಅವರ ಪ್ರಕಾರ ಬಾರಿ ಪ್ಲೇಆಫ್ ಆಡುವ ನಾಲ್ಕು ತಂಡಗಳು ಈ ಕೆಳಗಿನಂತಿದೆ...
ಚೆನ್ನೈ ಸೂಪರ್ ಕಿಂಗ್ಸ್
ರಾಯಲ್ ಚಾಲೆಂಜರ್ಸ್ ಬೆಂಗಳೂರು
ಸನ್ರೈಸರ್ಸ್ ಹೈದರಾಬಾದ್
ಗುಜರಾತ್ ಟೈಟಾನ್ಸ್
ಈ ನಾಲ್ಕು ತಂಡಗಳಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವು ಚಾಂಪಿಯನ್ ಪಟ್ಟಕ್ಕೇರಲಿದೆ ಎಂದು ಎಬಿ ಡಿವಿಲಿಯರ್ಸ್ ತಿಳಿಸಿದ್ದಾರೆ. ಒಟ್ಟಿನಲ್ಲಿ ಎಬಿಡಿ ಅವರ ಈ ಹೇಳಿಕೆಯು ಆರ್ಸಿಬಿ ಅಭಿಮಾನಿಗಳ ನಿರಾಸೆಗೆ ಕಾರಣವಾಗಿದ್ದಂತು ಸುಳ್ಳಲ್ಲ. ಇದಾಗ್ಯೂ ಆರ್ಸಿಬಿ ತಂಡವು ತನ್ನ ಮಾಜಿ ಆಟಗಾರನ ಭವಿಷ್ಯವನ್ನು ಸುಳ್ಳಾಗಿಸಲಿದೆಯಾ ಕಾದು ನೋಡಬೇಕಿದೆ.