IPL 2023: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 15ನೇ ಪಂದ್ಯವು ಇದೀಗ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ತಂಡವು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತ್ತು.
ಅದರಲ್ಲೂ ಆರಂಭಿಕರಾದ ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್ ಸಿಡಿಲಬ್ಬರದ ಆರಂಭ ಒದಗಿಸಿದ್ದರು. 11.2 ಓವರ್ಗಳಲ್ಲಿ 96 ರನ್ಗಳಿಸಿದ್ದ ಈ ಜೋಡಿಯನ್ನು ಬೇರ್ಪಡಿಸಿದ್ದು ಅನುಭವಿ ಸ್ಪಿನ್ನರ್ ಅಮಿತ್ ಮಿಶ್ರಾ. ಲಕ್ನೋ ತಂಡದ ಹಿರಿಯ ಸ್ಪಿನ್ನರ್ ಎಸೆತಕ್ಕೆ ಭರ್ಜರಿ ಉತ್ತರ ನೀಡಲು ಯತ್ನಿಸಿದ ವಿರಾಟ್ ಕೊಹ್ಲಿ (61) ಕ್ಯಾಚ್ ನೀಡಿದ್ದರು.
ಆದರೆ ಈ ಓವರ್ ವೇಳೆ ಅಮಿತ್ ಮಿಶ್ರಾ ಚೆಂಡಿಗೆ ಲಾಲಾರಸ (ಎಂಜಲು) ಬಳಸಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಐಸಿಸಿ ನಿಯಮದ ಪ್ರಕಾರ ಯಾವುದೇ ಸಂದರ್ಭದಲ್ಲೂ ಚೆಂಡಿಗೆ ಎಂಜಲನ್ನು ಬಳಸುವಂತಿಲ್ಲ. ಕಳೆದ ವರ್ಷ ಅಕ್ಟೋಬರ್ನಲ್ಲಿ ಚೆಂಡಿನ ಮೇಲ್ಮೈಗೆ ಎಂಜಲು ಬಳಸುವುದನ್ನು ಐಸಿಸಿ ಶಾಶ್ವತವಾಗಿ ನಿಷೇಧಿಸಿದೆ.
ಚೆಂಡಿನ ಮೇಲ್ಮೈಯನ್ನು ಎಂಜಲಿಂದ ಸವರಿದರೆ ಬಾಲ್ ಹೆಚ್ಚು ಸ್ವಿಂಗ್ ಪಡೆಯುತ್ತದೆ. ಇದೇ ತಂತ್ರವನ್ನು ಬಳಸಿ ಬೌಲರ್ಗಳು ಬ್ಯಾಟರ್ಗಳನ್ನು ಕಾಡುತ್ತಿದ್ದರು. ಆದರೆ ಕೋವಿಡ್ ಕಾರಣ ಐಸಿಸಿ ಚೆಂಡಿಗೆ ಎಂಜಲು ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಈ ನಿಯಮ ಐಪಿಎಲ್ಗೂ ಅನ್ವಯವಾಗುತ್ತದೆ.
ಇದಾಗ್ಯೂ ಅಮಿತ್ ಮಿಶ್ರಾ ಚೆಂಡಿಗೆ ಎಂಜಲನ್ನು ಬಳಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಅದರಲ್ಲೂ ಮಿಶ್ರಾ ಚೆಂಡಿಗೆ ಲಾಲಾರಸ ಬಳಸಲಾರಂಭಿಸುತ್ತಿದ್ದಂತೆ ವಿರಾಟ್ ಕೊಹ್ಲಿ ಔಟಾಗಿದ್ದಾರೆ. ಆದರೆ ಇದ್ಯಾವುದನ್ನು ಅಂಪೈರ್ ಗಮನಿಸಿಲ್ಲ ಎಂಬುದೇ ಅಚ್ಚರಿ.
ಏಕೆಂದರೆ ಬೌಲರ್ ಲಾಲಾರಸ ಬಳಸಿರುವುದು ಕಂಡು ಬಂದರೆ ಬಾಲ್ ಬದಲಿಸಬೇಕಾಗುತ್ತದೆ. ಅಲ್ಲದೆ ಬೌಲರ್ಗೆ ಮೊದಲ ಎಚ್ಚರಿಕೆ ನೀಡಬೇಕಾಗುತ್ತದೆ. ಇದನ್ನು ಪುನರಾವರ್ತಿಸಿದರೆ ಬ್ಯಾಟಿಂಗ್ ತಂಡಕ್ಕೆ 5 ರನ್ಗಳನ್ನು ಪೆನಾಲ್ಟಿಯಾಗಿ ನೀಡಬೇಕೆಂಬ ನಿಯಮವಿದೆ. ಆದರೆ ಅಂಪೈರ್ ನಿರ್ಲಕ್ಷ್ಯದಿಂದ ಚೆಂಡನ್ನು ಬದಲಿಸಲಾಗಿಲ್ಲ.
ಅಷ್ಟೇ ಅಲ್ಲದೆ ಅಮಿತ್ ಮಿಶ್ರಾಗೆ ಯಾವುದೇ ಎಚ್ಚರಿಕೆಯನ್ನೂ ಕೂಡ ನೀಡಿಲ್ಲ. ಇತ್ತ 2 ಓವರ್ ಬೌಲಿಂಗ್ ಮಾಡಿದ್ದಾರೆ. ಈ 12 ಎಸೆತಗಳ ನಡುವೆ ಅವರು ಚೆಂಡಿಗೆ ಎಂಜಲು ಸವರುವುದನ್ನು ಪುನರಾವರ್ತಿಸಿರಬಹುದು ಎಂಬ ವಾದ ಇದೀಗ ಮುನ್ನಲೆಗೆ ಬಂದಿದೆ.
ಅಂದರೆ ಅಮಿತ್ ಮಿಶ್ರಾ ಈ ತಪ್ಪನ್ನು ಪುನರಾವರ್ತಿಸಿದ್ದರೆ ಆರ್ಸಿಬಿಗೆ 5 ರನ್ಗಳನ್ನು ನೀಡಬೇಕಿತ್ತು. ಆದರೆ ಅಂಪೈರ್ ನಿರ್ಲಕ್ಷ್ಯದಿಂದಾಗಿ ಚೆಂಡು ಬದಲಾವಣೆ ಮಾಡಿಲ್ಲ. ಆರ್ಸಿಬಿಗೆ 5 ರನ್ ಕೂಡ ಸಿಗಲಿಲ್ಲ. ಒಂದು ವೇಳೆ ಪೆನಾಲ್ಟಿಯಾಗಿ ಈ 5 ರನ್ ಸಿಕ್ಕಿದಿದ್ದರೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ ತಂಡವು 4 ರನ್ಗಳಿಂದ ಜಯ ಸಾಧಿಸುತ್ತಿತ್ತು ಎಂಬುದು ಅಭಿಮಾನಿಗಳ ವಾದ.