ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಆರಂಭಕ್ಕೂ ಮುನ್ನವೇ ಸನ್ರೈಸರ್ಸ್ ಹೈದರಾಬಾದ್ ತಂಡ ನಾಯಕನನ್ನು ಬದಲಿಸಿದೆ. ಆದರೆ ಈ ಬದಲಾವಣೆ ಕೆಲ ಆರಂಭಿಕ ಪಂದ್ಯಗಳಿಗೆ ಮಾತ್ರ. ಈ ಬಾರಿ ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿ ಸೌತ್ ಆಫ್ರಿಕಾದ ಐಡೆನ್ ಮಾರ್ಕ್ರಾಮ್ ಆಯ್ಕೆಯಾಗಿದ್ದರು.
ಆದರೆ ಇದೀಗ ಮಾರ್ಕ್ರಾಮ್ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ . ಮಾರ್ಚ್ 31 ರಿಂದ ಸೌತ್ ಆಫ್ರಿಕಾ ಹಾಗೂ ನೆದರ್ಲ್ಯಾಂಡ್ಸ್ ನಡುವೆ ಏಕದಿನ ಸರಣಿ ಶುರುವಾಗಲಿದ್ದು, ಈ ಸರಣಿಯು ಏಪ್ರಿಲ್ 2 ರಂದು ಕೊನೆಗೊಳ್ಳಲಿದೆ. ಆ ಬಳಿಕವಷ್ಟೇ ಸೌತ್ ಆಫ್ರಿಕಾ ಆಟಗಾರರು ಐಪಿಎಲ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇತ್ತ ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕನಾಗಿ ಆಯ್ಕೆಯಾಗಿರುವ ಐಡೆನ್ ಮಾರ್ಕ್ರಾಮ್ ಏಪ್ರಿಲ್ 2 ರಂದು ನಡೆಯಲಿರುವ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಹೀಗಾಗಿ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಹಂಗಾಮಿ ನಾಯಕನನ್ನು ಆಯ್ಕೆ ಮಾಡಿದೆ.
ಅದರಂತೆ ಮೊದಲ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ವೇಗಿ ಭುವನೇಶ್ವರ್ ಕುಮಾರ್ ಮುನ್ನಡೆಸಲಿದ್ದಾರೆ. ಈ ಹಿಂದೆ ಭುವಿ ಎಸ್ಆರ್ಹೆಚ್ ತಂಡವನ್ನು 7 ಪಂದ್ಯಗಳಲ್ಲಿ ಮುನ್ನಡೆಸಿದ್ದರು. ಈ ವೇಳೆ ಸನ್ರೈಸರ್ಸ್ ಹೈದರಾಬಾದ್ ತಂಡವು 5 ಪಂದ್ಯಗಳಲ್ಲಿ ಸೋತರೆ, 2 ಪಂದ್ಯಗಳನ್ನು ಗೆದ್ದುಕೊಂಡಿತ್ತು. ಇದೀಗ ಮಾರ್ಕ್ರಾಮ್ ಅವರ ಅನುಪಸ್ಥಿತಿಯಲ್ಲಿ ಅನುಭವಿ ಆಟಗಾರನಿಗೆ ಎಸ್ಆರ್ಹೆಚ್ ಫ್ರಾಂಚೈಸಿ ನಾಯಕತ್ವ ನೀಡಿದೆ.
ಇನ್ನು ಐಡೆನ್ ಮಾರ್ಕ್ರಾಮ್ ಅಲ್ಲದೆ, ಎಸ್ಆರ್ಹೆಚ್ ತಂಡದಲ್ಲಿರುವ ಸೌತ್ ಆಫ್ರಿಕಾ ಆಟಗಾರರಾದ ಹೆನ್ರಿಕ್ ಕ್ಲಾಸೆನ್ ಹಾಗೂ ಮಾರ್ಕೊ ಯಾನ್ಸನ್ ಕೂಡ ಮೊದಲ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಇನ್ನು ಏಪ್ರಿಲ್ 7 ರಂದು ನಡೆಯಲಿರುವ 2ನೇ ಪಂದ್ಯದ ವೇಳೆಗೆ ಈ ಆಟಗಾರರು ತಂಡವನ್ನು ಕೂಡಿಕೊಳ್ಳಲಿದ್ದಾರೆ.
ಸನ್ ರೈಸರ್ಸ್ ಹೈದರಾಬಾದ್: ಮಯಾಂಕ್ ಅಗರ್ವಾಲ್, ಹ್ಯಾರಿ ಬ್ರೂಕ್, ರಾಹುಲ್ ತ್ರಿಪಾಠಿ, ಗ್ಲೆನ್ ಫಿಲಿಪ್ಸ್, ಅಭಿಷೇಕ್ ಶರ್ಮಾ, ಐಡೆನ್ ಮಾರ್ಕ್ರಾಮ್, ಅಬ್ದುಲ್ ಸಮದ್, ವಾಷಿಂಗ್ಟನ್ ಸುಂದರ್, ಅನ್ಮೋಲ್‌ಪ್ರೀತ್ ಸಿಂಗ್, ಅಕೇಲ್ ಹೊಸೈನ್, ನಿತೀಶ್ ಕುಮಾರ್ ರೆಡ್ಡಿ, ಮಯಾಂಕ್ ದಾಗರ್, ಉಪೇಂದ್ರ ಯಾದವ್, ಸನ್ವಿರ್ ಸಿಂಗ್, ಸಮರ್ಥ ವ್ಯಾಸ್, ವಿವ್ರಾಂತ್ ಶರ್ಮಾ, ಮಯಾಂಕ್ ಮಾರ್ಕಾಂಡೆ, ಆದಿಲ್ ರಶೀದ್, ಹೆನ್ರಿಕ್ ಕ್ಲಾಸೆನ್, ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಟಿ ನಟರಾಜನ್, ಕಾರ್ತಿಕ್ ತ್ಯಾಗಿ, ಫಜಲ್ಹಕ್ ಫಾರೂಕಿ.
Published On - 6:30 pm, Thu, 30 March 23