Updated on: Mar 20, 2023 | 12:20 PM
ಐಪಿಎಲ್‌ನಲ್ಲಿ ಆಡುವುದು ಪ್ರತಿಯೊಬ್ಬ ಕ್ರಿಕೆಟಿಗನ ಕನಸಾಗಿದೆ. ಮಾರ್ಚ್ 31ರಿಂದ ಆರಂಭವಾಗಲಿರುವ 16ನೇ ಆವೃತ್ತಿಯ ಐಪಿಎಲ್‌ನಲ್ಲಿ ಕೆಲ ಆಟಗಾರರ ಈ ಕನಸು ನನಸಾಗಲಿದೆ. ಇವರಲ್ಲಿ ಹಲವು ವಿದೇಶಿ ಆಟಗಾರರು ಸೇರಿದ್ದು, ಐಪಿಎಲ್‌ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿರುವ ಪ್ರಮುಖ 10 ವಿದೇಶಿ ಆಟಗಾರರ ವಿವರ ಇಲ್ಲಿದೆ.
ಹ್ಯಾರಿ ಬ್ರೂಕ್; ಇಂಗ್ಲೆಂಡ್‌ನ ಈ ಸ್ಫೋಟಕ ಬ್ಯಾಟರ್ ಕೂಡ ಮೊದಲ ಬಾರಿಗೆ ಐಪಿಎಲ್ ಆಡುತ್ತಿದ್ದು, ಇವರನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡ 13.25 ಕೋಟಿ ರೂ.ಗೆ ಖರೀದಿಸಿದೆ; ಬ್ರೂಕ್ ಇಂಗ್ಲೆಂಡ್ ಪರ 20 ಟಿ20 ಪಂದ್ಯಗಳನ್ನು ಆಡಿದ್ದು, ಅರ್ಧಶತಕ ಸೇರಿದಂತೆ 372 ರನ್ ಗಳಿಸಿದ್ದಾರೆ.
ಮೈಕಲ್ ಬ್ರೇಸ್‌ವೆಲ್; ಇಂಗ್ಲೆಂಡ್‌ನ ವಿಲ್ ಜ್ಯಾಕ್ಸ್ ಬದಲಿ ಆಟಗಾರನಾಗಿ ಆರ್ಸಿಬಿ ತಂಡ ಸೇರಿಕೊಂಡಿರುವ ನ್ಯೂಜಿಲೆಂಡ್‌ನ ಮೈಕೆಲ್ ಬ್ರೇಸ್‌ವೆಲ್ ಅವರಿಗೂ ಇದು ಚೊಚ್ಚಲ ಐಪಿಎಲ್ ಆಗಿದೆ. ನ್ಯೂಜಿಲೆಂಡ್ ಪರ ಟಿ20 ಪಂದ್ಯಗಳನ್ನು ಆಡಿರುವ ಬ್ರೇಸ್‌ವೆಲ್ ಇದರಲ್ಲಿ 21 ವಿಕೆಟ್‌ಗಳ ಜೊತೆಗೆ 113 ರನ್ ಕೂಡ ಬಾರಿಸಿದ್ದಾರೆ.
ರೀಸ್ ಟೋಪ್ಲಿ; ಇಂಗ್ಲೆಂಡ್‌ನ ಎಡಗೈ ವೇಗದ ಬೌಲರ್ ರೀಸ್ ಟೋಪ್ಲಿ ಕೂಡ ಮೊದಲ ಬಾರಿಗೆ ಐಪಿಎಲ್ ಆಡಲಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 1.90 ಕೋಟಿ ರೂ. ನೀಡಿ ಟೋಪ್ಲಿಯನ್ನು ಖರೀದಿಸಿದೆ. ಈ ಬೌಲರ್ ಇಂಗ್ಲೆಂಡ್ ಪರ ಇದುವರೆಗೆ 22 ಟಿ20 ಪಂದ್ಯಗಳನ್ನಾಡಿದ್ದು, ಅಷ್ಟೇ ವಿಕೆಟ್ ಪಡೆದಿದ್ದಾರೆ.
ಫಿಲ್ ಸಾಲ್ಟ್; ಇಂಗ್ಲೆಂಡ್‌ನ ಈ ಆಟಗಾರ ಎರಡು ಕೋಟಿ ಬೆಲೆಗೆ ಡೆಲ್ಲಿ ಕ್ಯಾಪಿಟಲ್ಸ್ ಸೇರಿಕೊಂಡಿದ್ದಾರೆ. ಈ ಆಟಗಾರ ಇಂಗ್ಲೆಂಡ್ ಪರ ಇದುವರೆಗೆ 16 ಟಿ20 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 308 ರನ್ ಬಾರುಸಿದ್ದಾರೆ. ಅವರ ಬ್ಯಾಟ್‌ನಿಂದ ಎರಡು ಅರ್ಧಶತಕಗಳು ಬಂದಿವೆ.
ಸಿಕಂದರ್ ರಜಾ; ಜಿಂಬಾಬ್ವೆಯ ಸಿಕಂದರ್ ರಜಾ ಕೂಡ ಮೊದಲ ಬಾರಿಗೆ ಐಪಿಎಲ್ ಆಡಲಿದ್ದಾರೆ. 50 ಲಕ್ಷ ರೂಪಾಯಿಗೆ ಪಂಜಾಬ್ ಕಿಂಗ್ಸ್ ಸೇರಿಕೊಂಡಿರುವ ರಜಾ, ಇದುವರೆಗೆ 66 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಆರು ಅರ್ಧಶತಕಗಳ ನೆರವಿನಿಂದ 1259 ರನ್ ಗಳಿಸಿದ್ದಾರೆ. ಹಾಗೆಯೇ ಬೌಲಿಂಗ್ನಲ್ಲಿ 38 ವಿಕೆಟ್ಗಳನ್ನು ಸಹ ಪಡೆದಿದ್ದಾರೆ.
ಜೋ ರೂಟ್; ಇಂಗ್ಲೆಂಡ್ ತಂಡದ ಅನುಭವಿ ಆಟಗಾರ ಜೋ ರೂಟ್ ಅವರನ್ನು ಮೊದಲ ಬಾರಿಗೆ ಅವರನ್ನು ಐಪಿಎಲ್ ತಂಡ ಖರೀದಿಸಿದೆ. 1 ಕೋಟಿ ರೂ.ಗೆ ರಾಜಸ್ಥಾನ್ ರಾಯಲ್ಸ್ ತಂಡ ಸೇರಿರುವ ರೂಟ್ ಇಂಗ್ಲೆಂಡ್ ಪರ 32 ಟಿ20 ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಐದು ಅರ್ಧಶತಕಗಳ ಸಹಾಯದಿಂದ 893 ರನ್ ಗಳಿಸಿದ್ದಾರೆ.
ಲಿಟನ್ ದಾಸ್; ಬಾಂಗ್ಲಾದೇಶದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಲಿಟನ್ ದಾಸ್ ಕೂಡ ಈ ಬಾರಿಯ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 50 ಲಕ್ಷ ರೂ. ನೀಡಿ ಖರೀದಿಸಿದೆ.
ಡುವಾನ್ ಯಾನ್ಸನ್; ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಡುವಾನ್ ಯಾನ್ಸನ್ ಕೂಡ ಐಪಿಎಲ್‌ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳಲಿದ್ದಾರೆ. ಅವರನ್ನು ಮುಂಬೈ ಇಂಡಿಯನ್ಸ್ ತಂಡ 20 ಲಕ್ಷ ರೂಪಾಯಿಗೆ ಖರೀದಿಸಿದೆ. ಈ ಆಟಗಾರ ಇನ್ನೂ ಅಂತರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿಲ್ಲ.
ಜೋಶ್ ಲಿಟಲ್; ಐರ್ಲೆಂಡ್‌ನ ಈ ಆಟಗಾರ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಆಡಲಿದ್ದಾರೆ. ಕಳೆದ ವರ್ಷ ಆಡಿದ ಟಿ20 ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದ ಲಿಟಲ್ ಅವರನ್ನು ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ 4.40 ಕೋಟಿ ರೂ. ನೀಡಿ ಖರೀದಿಸಿದೆ. ಈ ಎಡಗೈ ವೇಗದ ಬೌಲರ್ 53 ಟಿ20 ಪಂದ್ಯಗಳಲ್ಲಿ 62 ವಿಕೆಟ್ಗಳನ್ನು ಪಡೆದಿದ್ದಾರೆ.