Updated on:Feb 22, 2023 | 2:34 PM
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಾರ್ಚ್ 31 ರಿಂದ ಪ್ರಾರಂಭವಾಗುತ್ತಿದ್ದು, ಅದಕ್ಕೂ ಮೊದಲು ನಾಲ್ಕು ಬಾರಿಯ ಚಾಂಪಿಯನ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಶುಭ ಸುದ್ದಿ ಸಿಕ್ಕಿದೆ.
ಇಂಜುರಿಯಿಂದಾಗಿ ಕಳೆದ ವರ್ಷ ಐಪಿಎಲ್ನಿಂದ ಹೊರಬಿದ್ದಿದ್ದ ತಂಡದ ಸ್ವಿಂಗ್ ಬೌಲರ್‌ಗಳಲ್ಲಿ ಒಬ್ಬರಾದ ಆಲ್ ರೌಂಡರ್ ದೀಪಕ್ ಚಹಾರ್ ಇದೀಗ ಸಂಪೂರ್ಣವಾಗಿ ಫಿಟ್ ಆಗಿದ್ದು, ಈ ಆವೃತ್ತಿಯ ಐಪಿಎಲ್ನಲ್ಲಿ ಚೆನ್ನೈ ಪರ ಕಣಕ್ಕಿಳಿಯಲಿದ್ದಾರೆ.
ಕೊನೆಯ ಬಾರಿಗೆ ಬಾಂಗ್ಲಾದೇಶದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತದ ಪರ ಆಡಿದ್ದ ದೀಪಕ್ ಅಲ್ಲಿ ಕೇವಲ ಮೂರು ಓವರ್‌ಗಳನ್ನು ಮಾತ್ರ ಬೌಲ್ ಮಾಡಿದ್ದರು. ಆ ನಂತರ ಇಂಜುರಿಯಿಂದಾಗಿ ತಂಡದಿಂದ ಹೊರಬಿದ್ದಿದ್ದರು. 2022 ರಲ್ಲಿ ಭಾರತದ ಪರ ಕೇವಲ 15 ಪಂದ್ಯಗಳನ್ನು ಮಾತ್ರ ಆಡಿದ್ದ ದೀಪಕ್, ಗಾಯದ ಕಾರಣ T20 ವಿಶ್ವಕಪ್‌ನಿಂದ ಹೊರಗುಳಿದಿದ್ದರು. ಆರಂಭಿಕ ಓವರ್‌ಗಳಲ್ಲಿ ಸ್ವಿಂಗ್‌ನಲ್ಲಿ ಪರಿಣತಿ ಹೊಂದಿರುವ ಈ ಬೌಲರ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 14 ಕೋಟಿಗೆ ಖರೀದಿಸಿದೆ.
ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಚೇತರಿಸಿಕೊಂಡ ನಂತರ, ದೀಪಕ್ ಇದೀಗ ಐಪಿಎಲ್‌ಗೆ ತಯಾರಿ ನಡೆಸುತ್ತಿದ್ದಾರೆ. ಕಳೆದ ಎರಡು-ಮೂರು ತಿಂಗಳಿಂದ ನಾನು ಫಿಟ್‌ನೆಸ್‌ಗಾಗಿ ಶ್ರಮಿಸುತ್ತಿದ್ದೇನೆ, ನಾನು ಸಂಪೂರ್ಣವಾಗಿ ಫಿಟ್ ಆಗಿದ್ದೇನೆ ಮತ್ತು ಐಪಿಎಲ್‌ಗೆ ಉತ್ತಮ ತಯಾರಿ ನಡೆಸುತ್ತಿದ್ದೇನೆ ಎಂದು ಚಹಾರ್ ಹೇಳಿಕೊಂಡಿದ್ದಾರೆ.
ರಾಜಸ್ಥಾನದ ಈ ವೇಗಿ ಕಳೆದ ತಿಂಗಳು ಸರ್ವಿಸಸ್ ವಿರುದ್ಧದ ಪ್ರಥಮ ದರ್ಜೆ ಪಂದ್ಯದೊಂದಿಗೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ್ದರು. ಇದೀಗ ಐಪಿಎಲ್ ಮೂಲಕ ಕ್ರಿಕೆಟ್‌ಗೆ ಎಂಟ್ರಿಕೊಡುತ್ತಿರುವ ದೀಪಕ್, ಈ ವರ್ಷದ ಕೊನೆಯಲ್ಲಿ ತವರಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಆಡುವ ನಿರೀಕ್ಷೆಯಲ್ಲಿದ್ದಾರೆ.
Published On - 12:35 pm, Wed, 22 February 23