Updated on: Apr 29, 2023 | 6:22 PM
IPL 2023: ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆದ ಅಂಡರ್-16 ಆಟಗಾರರ ವಿಶೇಷ ಶಿಬಿರದಲ್ಲಿ RCB ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ಕಾಣಿಸಿಕೊಂಡಿದ್ದಾರೆ.
16 ವರ್ಷದೊಳಗಿನ ಈ ಶಿಬಿರದಲ್ಲಿ ಭಾಗವಹಿಸಿದ ದಿನೇಶ್ ಕಾರ್ತಿಕ್, ಯುವ ಪ್ರತಿಭೆಯೊಂದಿಗೆ ಸಂವಾದ ನಡೆಸಿದರು. ಅಲ್ಲದೆ ತಮ್ಮ ಕನಸುಗಳನ್ನು ಬೆನ್ನತ್ತಲು ಅಮೂಲ್ಯವಾದ ಸಲಹೆಗಳನ್ನು ಹಾಗೂ ಜೀವನ ಪಾಠಗಳನ್ನು ಹೇಳಿಕೊಟ್ಟಿದ್ದಾರೆ.
ಈ ವಿಶೇಷ ಸಂವಾದದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವೈರಲ್ ಬೆನ್ನಲ್ಲೇ ಡಿಕೆ ಟ್ರೋಲ್ಗೂ ಒಳಗಾಗಿರುವುದು ವಿಶೇಷ.
ಏಕೆಂದರೆ ಈ ಬಾರಿಯ ಐಪಿಎಲ್ನಲ್ಲಿ ದಿನೇಶ್ ಕಾರ್ತಿಕ್ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಆಡಿರುವ 8 ಪಂದ್ಯಗಳಿಂದ DK ಕೇವಲ 83 ರನ್ಗಳಿಸಿದ್ದಾರೆ. ಅಂದರೆ ತಂಡದ ಫಿನಿಶರ್ ಎನಿಸಿಕೊಂಡಿರುವ ಕಾರ್ತಿಕ್ ಅವರ ಬ್ಯಾಟ್ನಿಂದ ಕೇವಲ 11.86 ಸರಾಸರಿಯಲ್ಲಿ ರನ್ ಮೂಡಿಬಂದಿದೆ.
ಇತ್ತ ದಿನೇಶ್ ಕಾರ್ತಿಕ್ ಅವರಂತಹ ಅನುಭವಿ ಆಟಗಾರ ಮಧ್ಯಮ ಕ್ರಮಾಂಕದಲ್ಲಿ ವಿಫಲರಾಗುತ್ತಿರುವುದು ಆರ್ಸಿಬಿ ತಂಡದ ಸೋಲಿಗೆ ಪ್ರಮುಖ ಕಾರಣವಾಗುತ್ತಿದೆ. ಇಂತಹ ಕಳಪೆ ಫಾರ್ಮ್ನಲ್ಲಿರುವ ಡಿಕೆ ಯುವ ಕ್ರಿಕೆಟಿಗರಿಗೆ ಸಲಹೆ ನೀಡಲು ಹೋಗಿರುವುದನ್ನು ನೆಟ್ಟಿಗರು ಕಿಚಾಯಿಸುತ್ತಿದ್ದಾರೆ.
ಕೆಲವರು ಯುವ ಆಟಗಾರರಿಗೆ ನೀಡುವ ಸಲಹೆಯನ್ನು ನಿಮ್ಮದೇ ಕೆರಿಯರ್ನಲ್ಲಿ ಉಪಯೋಗಿಸಿ ಎಂದು ಕಿಚಾಯಿಸಿದರೆ, ಮತ್ತೆ ಕೆಲವರು ಕಳಪೆ ಫಾರ್ಮ್ನಲ್ಲಿದ್ದರೂ ಸತತ ಹೇಗೆ ಅವಕಾಶ ಪಡೆಯಬಹುದೆಂದು ಬಿಟ್ಟಿ ಸಲಹೆ ನೀಡಿರಬಹುದೇ? ವ್ಯಂಗ್ಯವಾಡಿದ್ದಾರೆ. ಮತ್ತೊಬ್ಬರು, ಸೀಮಿತ ಓವರ್ ಕ್ರಿಕೆಟ್ನಲ್ಲಿ 391 ಪಂದ್ಯಗಳನ್ನಾಡಿ ಒಂದೇ ಒಂದು ಶತಕ ಬಾರಿಸಲು ಸಾಧ್ಯವಾಗದ ಆಟಗಾರನಿಂದ ಯುವ ಪ್ರತಿಭೆಗಳಿಗೆ ಕ್ರಿಕೆಟ್ ಪಾಠ...ಎಂದು ಕಾಲೆಳೆದಿದ್ದಾರೆ.
ಒಟ್ಟಿನಲ್ಲಿ ಅಂಡರ್-16 ಆಟಗಾರರೊಂದಿಗೆ ಸಂವಾದ ನಡೆಸಿರುವ ದಿನೇಶ್ ಕಾರ್ತಿಕ್ ಇದೀಗ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಇದಾಗ್ಯೂ ಅವರ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ತಮ್ಮ ಹಳೆಯ ಖದರ್ ತೋರಿಸುವ ಮೂಲಕ ಟ್ರೋಲರ್ಸ್ಗೆ ಬ್ಯಾಟ್ ಮೂಲಕ ಉತ್ತರ ನೀಡಲಿದ್ದಾರಾ ಕಾದು ನೋಡಬೇಕಿದೆ.