Updated on: May 15, 2023 | 3:29 PM
ರಾಜಸ್ಥಾನ ರಾಯಲ್ಸ್ ತಂಡವನ್ನು 112 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಪ್ಲೇ ಆಫ್ ಕನಸನ್ನು ಇನ್ನು ಜೀವಂತವಾಗಿರಿಸಿಕೊಂಡಿದೆ . ಆರ್‌ಸಿಬಿ ನೀಡಿದ 172 ರನ್‌ಗಳ ಟಾರ್ಗೆಟ್ ಬೆನ್ನಟ್ಟಿದ ರಾಜಸ್ಥಾನ ತಂಡ 10.3 ಓವರ್‌ಗಳಲ್ಲಿ ಕೇವಲ 59 ರನ್‌ಗಳಿಗೆ ಸರ್ವಪತನಗೊಂಡಿತು.
ರಾಜಸ್ಥಾನ ವಿರುದ್ಧ ದೊಡ್ಡ ಅಂತರದಿಂದ ಗೆದ್ದ ಆರ್‌ಸಿಬಿ ತಂಡ ತನ್ನ ನೆಟ್ ರನ್ ರೇಟ್ ಅನ್ನು ಸುಧಾರಿಸಿಕೊಂಡ ಸಂತಸದಲ್ಲಿದ್ದರೆ, ಇತ್ತ ತಂಡದಲ್ಲಿರುವ ಅನುಭವಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಮಾತ್ರ ಯಾರಿಗೂ ಬೇಡದ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಳ್ಳಲು ಮುಂಬೈ ನಾಯಕ ರೋಹಿತ್ ಶರ್ಮಾ ಜೊತೆ ಪೈಪೋಟಿಗಿಳಿದಿದ್ದಾರೆ.
ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಶೂನ್ಯಕ್ಕೆ ಔಟಾದರು. ದಿನೇಶ್ ಅವರನ್ನು ಆಡಮ್ ಝಂಪಾ ಎಲ್ಬಿಡಬ್ಲ್ಯು ಔಟ್ ಮಾಡಿದರು. ಇದರೊಂದಿಗೆ ದಿನೇಶ್ ಕಾರ್ತಿಕ್ ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ವಿಚಾರದಲ್ಲಿ ರೋಹಿತ್ ಶರ್ಮಾ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ದಿನೇಶ್ ಕಾರ್ತಿಕ್ ಐಪಿಎಲ್‌ನಲ್ಲಿ ಇದುವರೆಗೆ 16 ಬಾರಿ ಶೂನ್ಯಕ್ಕೆ ಔಟಾಗಿದ್ದು, ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಕೂಡ ಇದುವರೆಗೆ ಐಪಿಎಲ್‌ನಲ್ಲಿ 16 ಬಾರಿ ಸೊನ್ನೆ ಸುತ್ತಿದ್ದಾರೆ. ಹಾಗಿದ್ದರೆ ಈ ಇಬ್ಬರನ್ನು ಹೊರತುಪಡಿಸಿ ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಟಾಪ್ 5 ಆಟಗಾರರು ಯಾರು ಎಂಬುದನ್ನು ನೋಡುವುದಾದರೆ...
ಈ ಇಬ್ಬರನ್ನು ಹೊರತುಪಡಿಸಿ ಸದ್ಯ ಕೆಕೆಆರ್ ಪರ ಆಡುತ್ತಿರುವ ಮಂದೀಪ್ ಸಿಂಗ್ 15 ಬಾರಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ.
ಕೆಕೆಆರ್ ತಂಡದ ಮತ್ತೊಬ್ಬ ಆಲ್ರೌಂಡರ್ ಸುನೀಲ್ ನರೈನ್ ಕೂಡ 15 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ.
ಇನ್ನು ಸಿಎಸ್ಕೆ ಪರ ಆಡುತ್ತಿರುವ ಅಂಬಟಿ ರಾಯುಡು ಕೂಡ ಐಪಿಎಲ್‌ನಲ್ಲಿ 14 ಬಾರಿ ಶೂನ್ಯಕ್ಕೆ ತಮ್ಮ ಇನ್ನಿಂಗ್ಸ್ ಮುಗಿಸಿದ್ದಾರೆ.
ಏತನ್ಮಧ್ಯೆ, ಆರ್‌ಸಿಬಿ 112 ರನ್‌ಗಳ ಅಂತರದಿಂದ ರಾಜಸ್ಥಾನವನ್ನು ಸೋಲಿಸುವ ಮೂಲಕ ದೊಡ್ಡ ಲಾಭವನ್ನು ಪಡೆದುಕೊಂಡಿದೆ. ಈ ಗೆಲುವಿನ ನಂತರ ಆರ್‌ಸಿಬಿ ಏಳನೇ ಸ್ಥಾನದಿಂದ ನೇರವಾಗಿ ಪಾಯಿಂಟ್ಸ್ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಜಿಗಿದಿದೆ.