IPL 2023: ಈ ಬಾರಿಯ ಐಪಿಎಲ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ತನ್ನ ಕೊನೆಯ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಸೋತು ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಏಕೆಂದರೆ ಆಡಿರುವ 13 ಪಂದ್ಯಗಳಲ್ಲಿ ಸಿಎಸ್ಕೆ ಗೆದ್ದಿರುವುದು 7 ಪಂದ್ಯಗಳನ್ನು ಮಾತ್ರ. ಇನ್ನು ಒಂದು ಪಂದ್ಯವು ಮಳೆಯ ಕಾರಣ ರದ್ದಾದ ಕಾರಣ 1 ಅಂಕ ಪಡೆದುಕೊಂಡಿದೆ.
ಅದರಂತೆ ಒಟ್ಟು 15 ಅಂಕಗಳನ್ನು ಹೊಂದಿದ್ದ ಸಿಎಸ್ಕೆ ತಂಡಕ್ಕೆ ಕೆಕೆಆರ್ ವಿರುದ್ಧದ ಪಂದ್ಯವು ನಿರ್ಣಾಯಕವಾಗಿತ್ತು. ಅಂದರೆ ಕೆಕೆಆರ್ ವಿರುದ್ಧ ಗೆದ್ದಿದ್ರೆ ಸಿಎಸ್ಕೆ ತಂಡವು 17 ಅಂಕಗಳೊಂದಿಗೆ ಪ್ಲೇಆಫ್ ಆಡುವುದು ಖಚಿತಪಡಿಸಿಕೊಳ್ಳುತ್ತಿತ್ತು. ಆದರೀಗ ತನ್ನ 13ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸೋಲನುಭವಿಸಿದೆ.
ಇನ್ನು ಸಿಎಸ್ಕೆಗೆ ಉಳಿದಿರುವುದು ಕೇವಲ 1 ಪಂದ್ಯ ಮಾತ್ರ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯಲಿರುವ ಈ ಪಂದ್ಯದಲ್ಲಿ ಚೆನ್ನೈ ಗೆದ್ದರೆ ಮಾತ್ರ ಪ್ಲೇಆಫ್ ಪ್ರವೇಶಿಸಲಿದೆ. ಒಂದು ವೇಳೆ ಸೋತರೆ ಪ್ಲೇಆಫ್ ರೇಸ್ನಿಂದಲೇ ಹೊರಬೀಳಬಹುದು.
ಏಕೆಂದರೆ ಪ್ರಸ್ತುತ ಅಂಕಪಟ್ಟಿಯಲ್ಲಿ ಗುಜರಾತ್ ಟೈಟಾನ್ಸ್ ತಂಡವು 16 ಅಂಕಗಳನ್ನು ಹೊಂದಿದೆ. ಮುಂದಿನ 2 ಪಂದ್ಯಗಳಲ್ಲಿ ಒಂದರಲ್ಲಿ ಜಯಿಸಿದರೆ ಪ್ಲೇಆಫ್ ಪ್ರವೇಶಿಸಲಿದೆ.
ಹಾಗೆಯೇ ಮುಂಬೈ ಇಂಡಿಯನ್ಸ್ ತಂಡವು ಮುಂದಿನ 2 ಪಂದ್ಯಗಳಲ್ಲಿ ಜಯ ಸಾಧಿಸಿದರೆ 18 ಅಂಕಗಳೊಂದಿಗೆ ನೇರವಾಗಿ ಪ್ಲೇಆಫ್ ಪ್ರವೇಶಿಸಲಿದೆ. ಒಂದು ವೇಳೆ ಒಂದು ಮ್ಯಾಚ್ನಲ್ಲಿ ಸೋತು, ಒಂದು ಪಂದ್ಯವನ್ನು ಗೆದ್ದರೆ ಒಟ್ಟು 16 ಅಂಕ ಪಡೆಯಲಿದೆ.
ಇನ್ನು ಲಕ್ನೋ ಸೂಪರ್ ಜೈಂಟ್ಸ್ ಈಗಾಗಲೇ 13 ಅಂಕಗಳಿಸಿದೆ. ಇನ್ನುಳಿದ 2 ಪಂದ್ಯಗಳಲ್ಲಿ ಜಯ ಸಾಧಿಸಿದರೆ ಪ್ಲೇಆಫ್ ಪ್ರವೇಶಿಸಬಹುದು. ಒಂದು ವೇಳೆ ಒಂದು ಪಂದ್ಯದಲ್ಲಿ ಸೋತರೂ 15 ಅಂಕ ಪಡೆಯಲಿದೆ.
ಇತ್ತ ಆರ್ಸಿಬಿ ತಂಡವು ಮುಂದಿನ 2 ಪಂದ್ಯಗಳನ್ನು ಗೆದ್ದರೆ 16 ಅಂಕಗಳನ್ನು ಪಡೆಯುವ ಅವಕಾಶವಿದೆ. ಅಂದರೆ ಇಲ್ಲಿ ಸಿಎಸ್ಕೆ ತಂಡವು ಮುಂದಿನ ಪಂದ್ಯದಲ್ಲಿ ಸೋತರೆ 16 ಅಂಕಗಳೊಂದಿಗೆ ಟಾಪ್-4 ಹಂತಕ್ಕೇರಲು ಆರ್ಸಿಬಿಗೆ ಉತ್ತಮ ಅವಕಾಶವಿದೆ.
ಹಾಗೆಯೇ ಪಂಜಾಬ್ ಕಿಂಗ್ಸ್ ತಂಡಕ್ಕೂ ಮುಂದಿನ 2 ಮ್ಯಾಚ್ಗಳನ್ನು ಗೆದ್ದು 16 ಪಾಯಿಂಟ್ಸ್ ಪಡೆಯಬಹುದು. ಇತ್ತ ಎರಡು ತಂಡಗಳಿಗೆ 16 ಅಂಕಗಳನ್ನು ಪಡೆಯುವ ಅವಕಾಶವಿರುವ ಕಾರಣ ಸಿಎಸ್ಕೆ ತಂಡವು ಮುಂದಿನ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಯಿದೆ.
ಏಕೆಂದರೆ ಮುಂದಿನ ಪಂದ್ಯದಲ್ಲಿ ಸಿಎಸ್ಕೆ ಸೋತರೆ 15 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿಯಲಿದೆ. ಅತ್ತ ಲಕ್ನೋ ಸೂಪರ್ ಜೈಂಟ್ಸ್ ಮುಂದಿನ 2 ಪಂದ್ಯಗಳಲ್ಲಿ ಗೆದ್ದರೆ 2ನೇ ಸ್ಥಾನದೊಂದಿಗೆ ಪ್ಲೇಆಫ್ ಪ್ರವೇಶಿಸಬಹುದು.
ಇಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮುಂದಿನ ಎದುರಾಳಿಗಳು ಮುಂಬೈ ಇಂಡಿಯನ್ಸ್ ಹಾಗೂ ಕೆಕೆಆರ್. ಒಂದು ವೇಳೆ ಲಕ್ನೋ ವಿರುದ್ಧ ಸೋತರೂ, ಮುಂಬೈ ಇಂಡಿಯನ್ಸ್ ತಂಡವು ತನ್ನ ಕೊನೆಯ ಪಂದ್ಯದಲ್ಲಿ ಎಸ್ಆರ್ಹೆಚ್ ವಿರುದ್ದ ಜಯ ಸಾಧಿಸಿ 16 ಅಂಕಗಳೊಂದಿಗೆ ನೆಟ್ ರನ್ ರೇಟ್ ಸಹಾಯದಿಂದ ಪಾಯಿಂಟ್ಸ್ ಟೇಬಲ್ನಲ್ಲಿ 3ನೇ ಸ್ಥಾನ ಪಡೆಯಬಹುದು.
ಇತ್ತ ಆರ್ಸಿಬಿ ಅಥವಾ ಪಂಜಾಬ್ ಕಿಂಗ್ಸ್ ತಂಡ ಉತ್ತಮ ನೆಟ್ ರನ್ ರೇಟ್ನೊಂದಿಗೆ ಮುಂದಿನ 2 ಪಂದ್ಯಗಳಲ್ಲಿ ಜಯ ಸಾಧಿಸಿದರೆ 16 ಅಂಕ ಪಡೆಯಲಿದೆ. ಅತ್ತ ಸಿಎಸ್ಕೆ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತರೆ 15 ಪಾಯಿಂಟ್ಸ್ನೊಂದಿಗೆ 6ನೇ ಅಥವಾ 7ನೇ ಸ್ಥಾನಕ್ಕೆ ಕುಸಿಯಲಿದೆ.
ಅಂದರೆ ಇಲ್ಲಿ ಸಿಎಸ್ಕೆ ತಂಡದ ಪಾಲಿಗೆ ಮುಂದಿನ ಪಂದ್ಯವು ಮಾಡು ಇಲ್ಲವೇ ಮಡಿ ಪಂದ್ಯ. ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆದ್ದರೆ ಆರ್ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ಪ್ಲೇಆಫ್ ಪ್ರವೇಶಿಸುವ ಹಾದಿ ಮತ್ತಷ್ಟು ಸುಗಮವಾಗಲಿದೆ.
Published On - 4:30 pm, Mon, 15 May 23