- Kannada News Photo gallery Cricket photos Kannada News | IPL 2023 RCB vs LSG Will Meet Again In Playoffs
IPL 2023: ಹೀಗಾದ್ರೆ RCB vs LSG ಮತ್ತೆ ಮುಖಾಮುಖಿ
IPL 2023 Kannada: ಲಕ್ನೋ ಸೂಪರ್ ಜೈಂಟ್ಸ್ ತಂಡವು ಮುಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲ್ಲುವುದರಿಂದ ಆರ್ಸಿಬಿಗೆ ಪ್ಲೇಆಫ್ ಪ್ರವೇಶಿಸುವ ಅವಕಾಶ ಸಿಗಲಿದೆ.
Updated on: May 15, 2023 | 8:28 PM

IPL 2023: ಐಪಿಎಲ್ನ ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ತಲುಪಿದೆ. ಇದರ ಬೆನ್ನಲ್ಲೇ ಪ್ರಮುಖ ತಂಡಗಳ ಪ್ಲೇಆಫ್ ಲೆಕ್ಕಾಚಾರಗಳು ಕೂಡ ಶುರುವಾಗಿದೆ. ಈ ಲೆಕ್ಕಾಚಾರದೊಂದಿಗೆ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಮತ್ತೆ ಮುಖಾಮುಖಿಯಾಗಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಈ ಹಿಂದೆ CSK ತಂಡವನ್ನು ಮಾತ್ರ ತನ್ನ ಸಾಂಪ್ರದಾಯಿಕ ಎದುರಾಳಿಯಾಗಿ ಕಾಣುತ್ತಿದ್ದ RCB ಅಭಿಮಾನಿಗಳಿಗೆ ಇದೀಗ LSG ಹೊಸ ಪ್ರತಿಸ್ಫರ್ಧಿಯಾಗಿ ಮಾರ್ಪಟ್ಟಿದೆ. ಇದಕ್ಕೆ ಕಾರಣ ಏಪ್ರಿಲ್ 10 ರಂದು ಬೆಂಗಳೂರಿನಲ್ಲಿ ನಡೆದ ಆರ್ಸಿಬಿ vs ಲಕ್ನೋ ನಡುವಣ ಪಂದ್ಯ.

ಈ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ 1 ವಿಕೆಟ್ನಿಂದ ರೋಚಕ ಜಯ ಸಾಧಿಸಿದ ಲಕ್ನೋ ಆಟಗಾರರು ಮೈಮರೆತು ಸಂಭ್ರಮಿಸಿದ್ದರು. ಅಲ್ಲದೆ LSG ತಂಡದ ಮೆಂಟರ್ ಗೌತಮ್ ಗಂಭೀರ್ ಆರ್ಸಿಬಿ ಅಭಿಮಾನಿಗಳನ್ನು ಕೆಣಕಿದ್ದರು.

ಆದರೆ ನಿರೀಕ್ಷೆಯಂತೆ 2ನೇ ಮುಖಾಮುಖಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಬಗ್ಗು ಬಡಿದು ಆರ್ಸಿಬಿ ಸೇಡು ತೀರಿಸಿಕೊಂಡಿತು. ಅದರಲ್ಲೂ ಏಟಿಗೆ ಎದಿರೇಟು ಎಂಬಂತೆ ಮುಟ್ಟಿ ನೋಡಿಕೊಳ್ಳುವಂತಹ ಸಂಭ್ರಮದ ಮೂಲಕ ವಿರಾಟ್ ಕೊಹ್ಲಿ ಲೆಕ್ಕ ಚುಕ್ತಾ ಮಾಡಿದ್ದರು.

ಇದೀಗ ಉಭಯ ತಂಡಗಳ ನಡುವಣ ಮತ್ತೊಂದು ಮುಖಾಮುಖಿಗೆ ಅಭಿಮಾನಿಗಳು ಕಾತುರರಾಗಿದ್ದಾರೆ. ಈ ಕಾತುರತೆ ಹೆಚ್ಚಲು ಮುಖ್ಯ ಕಾರಣ ಪ್ರಸ್ತುತ ಪಾಯಿಂಟ್ಸ್ ಟೇಬಲ್. ಅಂದರೆ ಪ್ಲೇಆಫ್ ರೇಸ್ನಲ್ಲಿ ಆರ್ಸಿಬಿ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳಿದ್ದು, ಹೀಗಾಗಿ ಉಭಯ ತಂಡಗಳು ಮತ್ತೆ ಮುಖಾಮುಖಿಯಾಗಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಪ್ರಸ್ತುತ ಪಾಯಿಂಟ್ಸ್ ಟೇಬಲ್ನಲ್ಲಿ 13 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡವು ಮುಂದಿನ 2 ಪಂದ್ಯಗಳನ್ನು ಗೆದ್ದರೆ 17 ಅಂಕಗಳೊಂದಿಗೆ ಪ್ಲೇಆಫ್ ಪ್ರವೇಶಿಸುವುದು ಖಚಿತ.

ಇತ್ತ ಲಕ್ನೋ ಸೂಪರ್ ಜೈಂಟ್ಸ್ ತಂಡವು ಮುಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲ್ಲುವುದರಿಂದ ಆರ್ಸಿಬಿಗೆ ಪ್ಲೇಆಫ್ ಪ್ರವೇಶಿಸುವ ಅವಕಾಶ ಸಿಗಲಿದೆ. ಅಂದರೆ 14 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿರುವ ಮುಂಬೈ ಮುಂದಿನ ಮ್ಯಾಚ್ನಲ್ಲಿ ಲಕ್ನೋ ವಿರುದ್ಧ ಸೋತು, ಕೊನೆಯ ಪಂದ್ಯದಲ್ಲಿ ಗೆದ್ದರೆ 16 ಪಾಯಿಂಟ್ಸ್ ಆಗಲಿದೆ.

ಹಾಗೆಯೇ 12 ಪಾಯಿಂಟ್ಸ್ ಹೊಂದಿರುವ ಆರ್ಸಿಬಿ ತಂಡವು ಉಳಿದಿರುವ 2 ಪಂದ್ಯಗಳಲ್ಲಿ ಉತ್ತಮ ನೆಟ್ ರನ್ ರೇಟ್ನೊಂದಿಗೆ ಭರ್ಜರಿ ಜಯ ಸಾಧಿಸಿದರೆ ಮುಂಬೈ ಇಂಡಿಯನ್ಸ್ ತಂಡವನ್ನು ಹಿಂದಿಕ್ಕಿ ಪ್ಲೇಆಫ್ ಪ್ರವೇಶಿಸುವ ಅವಕಾಶ ದೊರಯಲಿದೆ.

ಇನ್ನು ಪ್ರಸ್ತುತ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ ತಂಡವು ಮುಂದಿನ 2 ಪಂದ್ಯಗಳಲ್ಲಿ ಒಂದರಲ್ಲಿ ಜಯ ಸಾಧಿಸಿದರೆ 18 ಅಂಕಗಳೊಂದಿಗೆ ಪ್ಲೇಆಫ್ ಪ್ರವೇಶಿಸಲಿದೆ. ಹಾಗೆಯೇ ಸಿಎಸ್ಕೆ ತಂಡವು ಮುಂದಿನ ಪಂದ್ಯ ಗೆದ್ದರೆ 17 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ 2ನೇ ಸ್ಥಾನ ಪಡೆಯಲಿದೆ.

ಇತ್ತ ಲಕ್ನೋ ಸೂಪರ್ ಜೈಂಟ್ಸ್ ತಂಡವು ಮುಂದಿನ 2 ಪಂದ್ಯಗಳಲ್ಲಿ ಜಯ ಸಾಧಿಸಿದರೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆಯಬಹುದು. ಹಾಗೆಯೇ ಆರ್ಸಿಬಿ ಉಳಿದಿರುವ ಎರಡು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿ ಪಾಯಿಂಟ್ಸ್ ಟೇಬಲ್ನಲ್ಲಿ 4ನೇ ಸ್ಥಾನಕ್ಕೇರಬಹುದು.

ಇಲ್ಲಿ ಪ್ಲೇಆಫ್ ಹಂತದಲ್ಲಿ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನ ಹಾಗೂ ದ್ವಿತೀಯ ಸ್ಥಾನ ಪಡೆಯುವ ತಂಡಗಳು ಕ್ವಾಲಿಫೈಯರ್ ಪಂದ್ಯಗಳನ್ನಾಡಲಿದೆ. ಹಾಗೆಯೇ 3ನೇ ಹಾಗೂ 4ನೇ ಸ್ಥಾನ ಪಡೆಯುವ ತಂಡಗಳು ಎಲಿಮಿನೇಟರ್ ಪಂದ್ಯವಾಡಲಿದೆ.

ಅದರಂತೆ ಲಕ್ನೋ ಸೂಪರ್ ಜೈಂಟ್ಸ್ ತಂಡವು ಅಂಕಪಟ್ಟಿಯಲ್ಲಿ 3ನೇ ಸ್ಥಾನ ಪಡೆದರೆ ಹಾಗೂ ಆರ್ಸಿಬಿ 4ನೇ ಸ್ಥಾನ ಪಡೆದರೆ ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಒಂದು ವೇಳೆ ಲಕ್ನೋ 2ನೇ ಸ್ಥಾನ ಪಡೆದು ಮೊದಲ ಕ್ವಾಲಿಫೈಯರ್ನಲ್ಲಿ ಸೋತರೆ, ಎಲಿಮಿನೇಟರ್ನಲ್ಲಿ ಗೆದ್ದು ಆರ್ಸಿಬಿ 2ನೇ ಕ್ವಾಲಿಫೈಯರ್ನಲ್ಲಿ ಲಕ್ನೋ ತಂಡದ ವಿರುದ್ಧ ಸೆಣಸಬಹುದು.

ಇದಲ್ಲದೆ ಲಕ್ನೋ ಸೂಪರ್ ಜೈಂಟ್ಸ್ ಮೊದಲ ಕ್ವಾಲಿಫೈಯರ್ನಲ್ಲಿ ಗೆದ್ದು ಫೈನಲ್ ಪ್ರವೇಶಿಸಿದರೆ, ಆರ್ಸಿಬಿ ಎಲಿಮಿನೇಟರ್ ಪಂದ್ಯದಲ್ಲಿ ಜಯ ಸಾಧಿಸಿ, 2ನೇ ಕ್ವಾಲಿಫೈಯರ್ ಗೆದ್ದು ಫೈನಲ್ಗೆ ಎಂಟ್ರಿ ಕೊಡಬೇಕು. ಹೀಗೆ ನಡೆದರೂ ಉಭಯ ತಂಡಗಳು ಮುಖಾಮುಖಿಯಾಗಲಿದೆ.

ಆದರೆ ಇವೆಲ್ಲದಕ್ಕೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಆರ್ಸಿಬಿ ಪ್ಲೇಆಫ್ ಪ್ರವೇಶಿಸಬೇಕಾಗುತ್ತದೆ. ಹೀಗಾದ್ರೆ ಮಾತ್ರ ಮತ್ತೊಮ್ಮೆ ಹೈವೋಲ್ಟೇಜ್ ಪಂದ್ಯವನ್ನು ವೀಕ್ಷಿಸುವ ಅವಕಾಶ ದೊರೆಯಲಿದೆ.
