ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಗಾಗಿ ಸಿದ್ಧತೆಗಳು ಶುರುವಾಗಿದೆ. ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ಮುಂದಿನ ಸೀಸನ್ಗಾಗಿ ಬಲಿಷ್ಠ ತಂಡಗಳನ್ನು ರೂಪಿಸಿದೆ. ಇದರ ಬೆನ್ನಲ್ಲೇ ಇದೀಗ ಸಿಬ್ಬಂದಿ ವರ್ಗಗಳ ಆಯ್ಕೆಗೆ ಮುಂದಾಗಿದೆ. ಅದರಂತೆ ಇದೀಗ ಮುಂಬೈ ಇಂಡಿಯನ್ಸ್ ತಂಡದ ಸಿಬ್ಬಂದಿ ವರ್ಗದಲ್ಲೇ ಮಾಜಿ ಆರ್ಸಿಬಿ ಆಟಗಾರರೇ ಕಾಣಿಸಿಕೊಂಡಿರುವುದು ವಿಶೇಷ.
ಅಂದರೆ ಈ ಹಿಂದೆ ಆರ್ಸಿಬಿ ಪರ ಆಡಿದ್ದ ಆಟಗಾರರೇ ಇದೀಗ ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಹಾಗೂ ಇತರೆ ಹುದ್ದೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಿದ್ರೆ ಮುಂಬೈ ತಂಡದ ಸಿಬ್ಬಂದಿ ವರ್ಗದಲ್ಲಿರುವ ಮಾಜಿ ಆರ್ಸಿಬಿ ಪ್ಲೇಯರ್ಸ್ ಯಾರೆಲ್ಲಾ ಎಂದು ನೋಡೋಣ...
ಮಾರ್ಕ್ ಬೌಚರ್: ಸೌತ್ ಆಫ್ರಿಕಾದ ಮಾಜಿ ಆಟಗಾರ ಮಾರ್ಕ್ ಬೌಲರ್ ಇದೀಗ ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ವಿಶೇಷ. ಎಂದರೆ ಬೌಚರ್ 2008-2009 ರಲ್ಲಿ ಆರ್ಸಿಬಿ ಪರ 27 ಪಂದ್ಯಗಳನ್ನು ಆಡಿದ್ದರು. ಈ ವೇಳೆ 388 ರನ್ ಕಲೆಹಾಕಿದ್ದರು.
ಜಹೀರ್ ಖಾನ್: ಟೀಮ್ ಇಂಡಿಯಾದ ಮಾಜಿ ವೇಗಿ ಜಹೀರ್ ಖಾನ್ ಕೂಡ ಹಳೆಯ ಆರ್ಸಿಬಿ ಆಟಗಾರ. 2008, 2011 ರಿಂದ 2013ರವರೆಗೆ ಆರ್ಸಿಬಿ ತಂಡದಲ್ಲಿದ್ದ ಜಹೀರ್ ಖಾನ್ 44 ಪಂದ್ಯಗಳನ್ನಾಡಿದ್ದರು. ಈ ವೇಳೆ 49 ವಿಕೆಟ್ ಕಬಳಿಸಿ ಮಿಂಚಿದ್ದರು. ಇದೀಗ ಟೀಮ್ ಇಂಡಿಯಾದ ಮಾಜಿ ಎಡಗೈ ವೇಗಿ ಮುಂಬೈ ಇಂಡಿಯನ್ಸ್ ತಂಡದ ಹೆಡ್ ಆಫ್ ಕ್ರಿಕೆಟ್ ಡೆವೆಲೆಪ್ಮೆಂಟ್ ಹುದ್ದೆಯನ್ನು ಅಲಂಕರಿಸಿದ್ದಾರೆ.
ವಿನಯ್ ಕುಮಾರ್: ಕರ್ನಾಟಕದ ಮಾಜಿ ವೇಗಿ ವಿನಯ್ ಕುಮಾರ್ ಇದೀಗ ಮುಂಬೈ ಫ್ರಾಂಚೈಸಿಯ ಟ್ಯಾಲೆಂಟ್ ಸ್ಕೌಟ್ ಮತ್ತು ಬೌಲಿಂಗ್ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಆರ್ಸಿಬಿ ಪರ 64 ಪಂದ್ಯಗಳನ್ನಾಡಿದ್ದ ವಿನಯ್ ಒಟ್ಟು 72 ವಿಕೆಟ್ ಕಬಳಿಸಿ ಮಿಂಚಿದ್ದರು ಎಂಬುದು ವಿಶೇಷ.
ಪಾರ್ಥೀವ್ ಪಟೇಲ್: ಆರ್ಸಿಬಿ 32 ಪಂದ್ಯಗಳನ್ನು ಆಡಿರುವ ಪಾರ್ಥೀವ್ ಪಟೇಲ್ ಇದೀಗ ಮುಂಬೈ ಫ್ರಾಂಚೈಸಿಯ ಟ್ಯಾಲೆಂಟ್ ಸ್ಕೌಟ್ ಮತ್ತು ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅರುಣ್ ಕುಮಾರ್ ಜಗದೀಶ್: 2008 ರಲ್ಲಿ ಆರ್ಸಿಬಿ ಪರ 3 ಪಂದ್ಯಗಳನ್ನಾಡಿದ್ದ ಅರುಣ್ ಕುಮಾರ್ ಜಗದೀಶ್ ಇದೀಗ ಮುಂಬೈ ಇಂಡಿಯನ್ಸ್ ತಂಡದ ಸಹಾಯಕ ಬ್ಯಾಟಿಂಗ್ ಕೋಚ್ ಆಗಿ ಆಯ್ಕೆಯಾಗಿದ್ದಾರೆ.