ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ನಲ್ಲಿ ಅವಕಾಶ ಪಡೆಯುವ ಮೂಲಕ ಶ್ರೀಮಂತರಾಗಿರುವ ಆಟಗಾರರು ಒಬ್ಬಿಬ್ಬರಲ್ಲ. ಅನೇಕ ಆಟಗಾರರು ಐಪಿಎಲ್ ಮೂಲಕವೇ ಜೀವನ ಕಟ್ಟಿಕೊಂಡಿದ್ದಾರೆ. ಅದರಲ್ಲೂ ವಿದೇಶಿ ಆಟಗಾರರು ಕೂಡ ಐಪಿಎಲ್ ಮೂಲಕವೇ ಆದಾಯಗಳಿಸಲು ಮುಂದಾಗುತ್ತಿದ್ದಾರೆ. ಹೀಗಾಗಿಯೇ ಈ ಬಾರಿ ಕೂಡ ಐಪಿಎಲ್ ಹರಾಜಿಗಾಗಿ 277 ವಿದೇಶಿ ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದರು. ಆದರೆ ಅವರಲ್ಲಿ ಕೆಲವೇ ಕೆಲವು ಆಟಗಾರರ ಅದೃಷ್ಟು ಖುಲಾಯಿಸಿದೆ.
ಹೀಗೆ ಚೊಚ್ಚಲ ಎಂಟ್ರಿಯೊಂದಿಗೆ ಅದೃಷ್ಟ ಖುಲಾಯಿಸಿದ ಆಟಗಾರನ ಹೆಸರು ಹ್ಯಾರಿ ಬ್ರೂಕ್. ಇಂಗ್ಲೆಂಡ್ನ ಈ ಹೊಡಿಬಡಿ ದಾಂಡಿಗನನ್ನು ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಬರೋಬ್ಬರಿ 13.25 ಕೋಟಿ ರೂ.ಗೆ ಖರೀದಿಸಿದೆ.
ಆದರೆ ಹ್ಯಾರಿ ಬ್ರೂಕ್ ಲೀಗ್ ಕ್ರಿಕೆಟ್ನಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಪಾಕಿಸ್ತಾನ್ ಸೂಪರ್ ಲೀಗ್ನಲ್ಲೂ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದರು. ಆದರೆ PSL ನಲ್ಲಿ ಸಿಗುತ್ತಿರುವ ಮೊತ್ತಕ್ಕಿಂತ 30 ಪಟ್ಟು ಹೆಚ್ಚು ಮೊತ್ತವನ್ನು ಒಂದೇ ಒಂದು ಐಪಿಎಲ್ ಬಿಡ್ಡಿಂಗ್ ಮೂಲಕ ಸಂಪಾದಿಸಿರುವುದು ಇಲ್ಲಿ ವಿಶೇಷ.
ಅಂದರೆ ಕಳೆದ ಕೆಲ ಸೀಸನ್ಗಳಿಂದ ಪಾಕಿಸ್ತಾನ್ ಸೂಪರ್ ಲೀಗ್ ಆಡುತ್ತಿರುವ ಹ್ಯಾರಿ ಬ್ರೂಕ್ಗೆ ಪ್ರಸ್ತುತ ಸಿಗುತ್ತಿರುವುದು 50 ಸಾವಿರ ಡಾಲರ್. ಅಂದರೆ ಸುಮಾರು 41 ಲಕ್ಷ ರೂ. ಆದರೆ ಚೊಚ್ಚಲ ಬಾರಿಗೆ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಂಡ ಬ್ರೂಕ್ ಕೋಟ್ಯಧಿಪತಿಯಾಗಿ ಹೊರಹೊಮ್ಮಿದ್ದಾರೆ.
ಈ ಬಾರಿಯ ಮಿನಿ ಹರಾಜಿನಲ್ಲಿ ಹ್ಯಾರಿ ಬ್ರೂಕ್ರನ್ನು ಬರೋಬ್ಬರಿ 13 ಕೋಟಿ 25 ಲಕ್ಷ ರೂ. ನೀಡಿ ಎಸ್ಆರ್ಹೆಚ್ ತಂಡ ಖರೀದಿಸಿದೆ. ಅಂದರೆ ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಸಿಗುವ ಮೊತ್ತಕ್ಕಿಂತ 12 ಕೋಟಿ 84 ಲಕ್ಷ ರೂ. ಅನ್ನು ಒಂದೇ ಸೀಸನ್ ಮೂಲಕ ಬ್ರೂಕ್ ಪಡೆದುಕೊಂಡಿದ್ದಾರೆ. ಇದೇ ಕಾರಣದಿಂದಾಗಿಯೇ ಐಪಿಎಲ್ ಅನ್ನು ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಎನ್ನಲಾಗುತ್ತದೆ.
ಸದ್ಯ ಭರ್ಜರಿ ಫಾರ್ಮ್ನಲ್ಲಿರುವ ಬ್ರೂಕ್ ಇತ್ತೀಚೆಗೆ ಪಾಕಿಸ್ತಾನ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಬ್ಬರಿಸಿದ್ದರು. ಇಂಗ್ಲೆಂಡ್ ಪರ ಕೇವಲ 4 ಟೆಸ್ಟ್ ಪಂದ್ಯಗಳಲ್ಲಿ 6 ಇನಿಂಗ್ಸ್ ಆಡಿರುವ 23 ರ ಹರೆಯದ ಬಲಗೈ ಬ್ಯಾಟರ್ ಕೇವಲ 521 ಎಸೆತಗಳನ್ನು ಎದುರಿಸಿ 480 ರನ್ ಬಾರಿಸಿದ್ದಾರೆ. ಈ ವೇಳೆ 12 ಸಿಕ್ಸ್ ಹಾಗೂ 55 ಫೋರ್ ಸಿಡಿಸಿದ್ದರು. ಈ ಸ್ಪೋಟಕ ಇನಿಂಗ್ಸ್ ಪರಿಣಾಮ ಇದೀಗ ಹ್ಯಾರಿ ಬ್ರೂಕ್ಗೆ ಚೊಚ್ಚಲ ಬಾರಿ ಐಪಿಎಲ್ನಲ್ಲಿ ಅವಕಾಶ ಸಿಕ್ಕಿದೆ.
Published On - 6:31 pm, Sun, 25 December 22