Updated on: Dec 24, 2022 | 7:30 PM
IPL 2023: ಐಪಿಎಲ್ ಸೀಸನ್ 16 ಮಿನಿ ಹರಾಜಿಗಾಗಿ ಈ ಬಾರಿ 991 ಆಟಗಾರರು ಹೆಸರು ನೀಡಿದ್ದರು. ಈ ಆಟಗಾರರ ಪಟ್ಟಿಯನ್ನು ಶಾರ್ಟ್ ಲೀಸ್ಟ್ ಮಾಡಿ ಹರಾಜಿಗಾಗಿ 405 ಆಟಗಾರರನ್ನು ಆಯ್ಕೆ ಮಾಡಲಾಗಿತ್ತು. ಅದರಂತೆ ಡಿಸೆಂಬರ್ 23 ರಂದು ನಡೆದ ಮಿನಿ ಹರಾಜಿನಲ್ಲಿ 10 ಫ್ರಾಂಚೈಸಿಗಳು ಒಟ್ಟು 167 ಕೋಟಿ ವ್ಯಯಿಸಿ 80 ಆಟಗಾರರನ್ನು ಖರೀದಿಸಿದೆ.
ವಿಶೇಷ ಎಂದರೆ ಈ 80 ಆಟಗಾರರಲ್ಲಿ ಐರ್ಲೆಂಡ್, ಜಿಂಬಾಬ್ವೆ ಹಾಗೂ ನಮೀಬಿಯಾ ಆಟಗಾರರಿದ್ದಾರೆ. ಅಂದರೆ ಇದೇ ಮೊದಲ ಬಾರಿಗೆ ಐರ್ಲೆಂಡ್ ಹಾಗೂ ನಮೀಬಿಯಾ ಆಟಗಾರರು ಐಪಿಎಲ್ನಲ್ಲಿ ಚೊಚ್ಚಲ ಅವಕಾಶ ಪಡೆದಿದ್ದಾರೆ. ಹಾಗಿದ್ರೆ ಈ ಬಾರಿಯ ಹರಾಜಿನ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅವಕಾಶ ಗಿಟ್ಟಿಸಿಕೊಂಡ ಮೂವರು ಆಟಗಾರರು ಯಾರೆಂದು ನೋಡೋಣ...
ಸಿಕಂದರ್ ರಾಜಾ: ಜಿಂಬಾಬ್ವೆ ತಂಡದ ಸ್ಟಾರ್ ಆಲ್ರೌಂಡರ್ ಸಿಕಂದರ್ ರಾಜಾ ಇದೇ ಮೊದಲ ಬಾರಿಗೆ ಐಪಿಎಲ್ನಲ್ಲಿ ಅವಕಾಶ ಪಡೆದಿದ್ದಾರೆ. ಈ ಬಾರಿ ಹರಾಜಿನಲ್ಲಿ 50 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ರಾಜಾ ಅವರನ್ನು ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಬೇಸ್ ಪ್ರೈಸ್ಗೆ ಖರೀದಿಸಿದೆ.
ಡೇವಿಡ್ ವೀಝ: ನಮೀಬಿಯಾ ತಂಡದ ಸ್ಟಾರ್ ಆಲ್ರೌಂಡರ್ ಡೇವಿಡ್ ವೀಝ ಅವರನ್ನು 1 ಕೋಟಿ ರೂ. ಮೂಲಬೆಲೆಗೆ ಕೆಕೆಆರ್ ತಂಡ ಖರೀದಿಸಿದೆ. ಇದರೊಂದಿಗೆ ಐಪಿಎಲ್ನಲ್ಲಿ ಅವಕಾಶ ಪಡೆದ ಮೊದಲ ನಬೀಯನ್ ಆಟಗಾರ ಎಂಬ ಹೆಗ್ಗಳಿಕೆಗೆ ವೀಝ ಪಾತ್ರರಾಗಿದ್ದಾರೆ.
ಜೋಶ್ವ ಲಿಟಲ್: ಐರ್ಲೆಂಡ್ನ ಯುವ ವೇಗಿ ಜೋಶ್ವ ಲಿಟಲ್ ಚೊಚ್ಚಲ ಬಾರಿ ಐಪಿಎಲ್ನಲ್ಲಿ ಅವಕಾಶ ಪಡೆದಿದ್ದಾರೆ. 50 ಲಕ್ಷ ರೂ. ಮೂಲ ಬೆಲೆಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಂಡ ಜೋಶ್ವರನ್ನು ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು 4.40 ಲಕ್ಷ ರೂ.ಗೆ ಖರೀದಿಸಿದೆ. ಇದರೊಂದಿಗೆ ಐಪಿಎಲ್ಗೆ ಆಯ್ಕೆಯಾದ ಮೊದಲ ಐರ್ಲೆಂಡ್ ಆಟಗಾರ ಎಂಬ ದಾಖಲೆ ಜೋಶ್ವ ಲಿಟಲ್ ಪಾಲಾಗಿದೆ.