Updated on: Jan 08, 2023 | 8:30 PM
IPL 2023: ಐಪಿಎಲ್ ಸೀಸನ್ 16 ನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಹೊರಗುಳಿಯುವುದು ಖಚಿತವಾಗಿದೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಕಾರು ಅಪಘಾತದಲ್ಲಿ ಪಂತ್ ಗಂಭೀರವಾಗಿ ಗಾಯಗೊಂಡಿದ್ದರು. ಇದೀಗ ಮುಂಬೈನ ಕೋಕಿಲಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಡೆಲ್ಲಿ ತಂಡದ ನಾಯಕ ಮುಂದಿನ 6 ತಿಂಗಳುಗಳ ಕಾಲ ಮೈದಾನದಲ್ಲಿ ಕಾಣಿಸಿಕೊಳ್ಳುವುದಿಲ್ಲ.
ಇತ್ತ ಬಿಸಿಸಿಐ ರಿಷಭ್ ಪಂತ್ ವೈದ್ಯಕೀಯ ವೆಚ್ಚಗಳನ್ನು ಭರಿಸುವುದಾಗಿ ಹೇಳಿಕೊಂಡಿದೆ. ಅಷ್ಟೇ ಅಲ್ಲದೆ ಈ ಹಿಂದಿನ ಒಪ್ಪಂದಂತೆ ಅವರಿಗೆ ನೀಡಬೇಕಾದ ಮೊತ್ತವನ್ನೂ ಕೂಡ ಬಿಸಿಸಿಐ ನೀಡಲಿದೆ ಎಂದು ಇನ್ಸೈಡ್ ಸ್ಪೋರ್ಟ್ಸ್ ವರದಿ ಮಾಡಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿರುವ ರಿಷಭ್ ಪಂತ್ ಕಳೆದ ಬಾರಿಯ ಒಪ್ಪಂದಂತೆ ಈ ಸಲ ಐಪಿಎಲ್ ಫ್ರಾಂಚೈಸಿಯಿಂದ 16 ಕೋಟಿ ರೂ. ಪಡೆಯಬೇಕಿತ್ತು. ಇದೀಗ ಈ ಮೊತ್ತವನ್ನು ಬಿಸಿಸಿಐ ನೀಡಲು ಮುಂದಾಗಿದೆ. ಅಷ್ಟೇ ಅಲ್ಲದೆ ಟೀಮ್ ಇಂಡಿಯಾ ಆಟಗಾರರ ಗುತ್ತಿಗೆಯಿಂದ ನೀಡಲಾಗುವ 5 ಕೋಟಿ ರೂ. ಅನ್ನು ಸಹ ಬಿಸಿಸಿಐ ಪಾವತಿಸಲಿದೆ ಎಂದು ವರದಿಯಾಗಿದೆ.
ಅಂದರೆ ಐಪಿಎಲ್ ಹಾಗೂ ಬಿಸಿಸಿಐ ಒಪ್ಪಂದ ಪ್ರಕಾರ ಈ ವರ್ಷ ರಿಷಭ್ ಪಂತ್ ಪಡೆಯಬೇಕಿದ್ದ ಸಂಪೂರ್ಣ ಮೊತ್ತವನ್ನು ಬಿಸಿಸಿಐ ಪಾವತಿಸಲಿದೆ. ಅದರಂತೆ ಈ ವರ್ಷ ರಿಷಭ್ ಪಂತ್ ಒಟ್ಟು 21 ಕೋಟಿ ರೂ. ಪಡೆಯಲಿದ್ದಾರೆ.
Rishabh Pant Delhi Capitals
ಸದ್ಯ ಚಿಕಿತ್ಸೆಯಲ್ಲಿರುವ ರಿಷಭ್ ಪಂತ್ ಶುಕ್ರವಾರ ಸಂಜೆ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಇದಾಗ್ಯೂ ಅವರು ಮುಂದಿನ 6 ತಿಂಗಳುಗಳ ಕಾಲ ಮೈದಾನಕ್ಕಿಳಿಯಲಾಗುವುದಿಲ್ಲ ಎಂದು ತಿಳಿದು ಬಂದಿದೆ. ಅದರಲ್ಲೂ ಏಕದಿನ ವಿಶ್ವಕಪ್ನಲ್ಲೂ ರಿಷಭ್ ಪಂತ್ ಕಾಣಿಸಿಕೊಳ್ಳುವುದು ಅನುಮಾನ.
Published On - 8:30 pm, Sun, 8 January 23