
ಐಪಿಎಲ್ ಸೀಸನ್ 16 ಮಿನಿ ಹರಾಜಿನಲ್ಲಿ ಇಂಗ್ಲೆಂಡ್ನ ಯುವ ಆಲ್ರೌಂಡರ್ ಸ್ಯಾಮ್ ಕರನ್ ದಾಖಲೆಯ ಮೊತ್ತಕ್ಕೆ ಹರಾಜಾಗಿದ್ದರು. 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಸ್ಯಾಮ್ ಖರೀದಿಗೆ ಫ್ರಾಂಚೈಸಿಗಳ ನಡುವೆ ಭರ್ಜರಿ ಪೈಪೋಟಿ ಕಂಡು ಬಂದಿತ್ತು. ಇದಾಗ್ಯೂ ಅಂತಿಮವಾಗಿ 18.50 ಕೋಟಿ ರೂ. ನೀಡುವ ಮೂಲಕ ಪಂಜಾಬ್ ಕಿಂಗ್ ಫ್ರಾಂಚೈಸಿಯು ಸ್ಯಾಮ್ ಕರನ್ ಅವರನ್ನು ತಮ್ಮದಾಗಿಸಿಕೊಂಡರು.

ವಿಶೇಷ ಎಂದರೆ ಐಪಿಎಲ್ ಇತಿಹಾಸದಲ್ಲೇ ಯಾವುದೇ ಆಟಗಾರನ ಖರೀದಿಗೆ ಫ್ರಾಂಚೈಸಿಗಳು ಇಷ್ಟೊಂದು ಮೊತ್ತ ಪಾವತಿಸಿರಲಿಲ್ಲ. ಇದೀಗ 18.50 ಕೋಟಿ ಬಾಚಿಕೊಳ್ಳುವ ಮೂಲಕ ಐಪಿಎಲ್ನ ಅತ್ಯಂತ ದುಬಾರಿ ಆಟಗಾರನಾಗಿ ಸ್ಯಾಮ್ ಕರನ್ ಹೊರಹೊಮ್ಮಿದ್ದಾರೆ. ಇದೇ ವೇಳೆ ಮತ್ತೊಂದೆಡೆ ಸ್ಯಾಮ್ ಕರನ್ ಅವರ ಅಣ್ಣ ಟಾಮ್ ಕರನ್ ಹರಾಜಾಗದೇ ಉಳಿದದ್ದು ವಿಶೇಷ.

ಕೇವಲ 75 ಲಕ್ಷ ರೂ. ಮೂಲ ಬೆಲೆಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ಟಾಮ್ ಕರನ್ ಅವರ ಖರೀದಿಗೆ ಯಾವುದೇ ಫ್ರಾಂಚೈಸಿಗಳು ಆಸಕ್ತಿ ತೋರಲಿಲ್ಲ. ತಮ್ಮನಂತೆ ಬಲಗೈ ಆಲ್ರೌಂಡರ್ ಆಗಿ ಗುರುತಿಸಿಕೊಂಡಿರುವ ಟಾಮ್ ಈ ಹಿಂದೆ ಐಪಿಎಲ್ ಆಡಿದ್ದರು.

2018 ರಲ್ಲಿ ಕೆಕೆಆರ್ ಪರ ಕಣಕ್ಕಿಳಿಯುವ ಮೂಲಕ ಐಪಿಎಲ್ ಅಭಿಯಾನ ಆರಂಭಿಸಿದ್ದ ಟಾಮ್ ಕರನ್ 2021 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ದರು. ಇನ್ನು ಗಾಯದ ಕಾರಣ ಐಪಿಎಲ್ 2022 ರನ್ನು ತಪ್ಪಿಸಿಕೊಂಡಿದ್ದರು.

ಕೊಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ್ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪರ ಒಟ್ಟು 13 ಪಂದ್ಯಗಳನ್ನಾಡಿರುವ ಟಾಮ್ ಕರನ್ 13 ವಿಕೆಟ್ ಪಡೆದಿದ್ದಾರೆ. ಇದಾಗ್ಯೂ ಬ್ಯಾಟಿಂಗ್ನಲ್ಲಿ ಮಿಂಚುವಲ್ಲಿ ಸಫಲರಾಗಿರಲಿಲ್ಲ. ಇದಾಗ್ಯೂ ಈ ಬಾರಿ 75 ಲಕ್ಷ ರೂ. ಮೂಲಬೆಲೆಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಂಡಿದ್ದರು.

ಆದರೆ ಒಂದೆಡೆ ತಮ್ಮ ಸ್ಯಾಮ್ ಕರನ್ ಖರೀದಿಗೆ ಐಪಿಎಲ್ ಫ್ರಾಂಚೈಸಿಗಳು ಕೋಟಿಗಳನ್ನು ನೀಡಲು ಮುಂದಾದರೆ, ಇತ್ತ ಅಣ್ಣ ಟಾಮ್ ಕರನ್ ಅವರನ್ನು ಮೂಲ ಬೆಲೆಗೂ ಖರೀದಿಸಲು ಆಸಕ್ತಿ ತೋರಲಿಲ್ಲ ಎಂಬುದೇ ವಿಶೇಷ.