ಈ ಬಾರಿಯ ಮಿನಿ ಹರಾಜಿನಲ್ಲಿ ನಿರೀಕ್ಷೆಯಂತೆ ವಿದೇಶಿ ಆಟಗಾರರ ಮೇಲೆ ಭಾರಿ ಹೂಡಿಕೆ ಮಾಡಲಾಗಿದೆ. ಅದರಲ್ಲೂ ಇಂಗ್ಲೆಂಡ್ ತಂಡದ ಆಲ್ರೌಂಡರ್ಗಳನ್ನು ಎಲ್ಲಾ ಫ್ರಾಂಚೈಸಿಗಳು ಮುಗಿಬಿದ್ದು ಖರೀದಿಸಿದ್ದು ಆಯ್ತು. ಆದರೆ ಈ ನಡುವೆ ಭಾರತೀಯ ಆಟಗಾರರಿಗೂ ಹೇಳಿ ಕೊಳ್ಳುವಷ್ಟಿಲ್ಲದಿದ್ದರೂ ನಿರೀಕ್ಷೆಗೂ ಮೀರಿದ ಸಂಭಾವನೆ ನೀಡಲಾಗಿದೆ. ಅಂತಹ ಕೆಲವು ಆಟಗಾರರ ಪಟ್ಟಿ ಇಲ್ಲಿದೆ.
ಕಳೆದ ಸೀಸನ್ನಲ್ಲಿ ಮಯಾಂಕ್ ಅಗರ್ವಾಲ್ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿದ್ದರು. ಆದರೆ, ಈ ಬಾರಿ ಅವರು ಸನ್‌ರೈಸರ್ಸ್ ಹೈದರಾಬಾದ್ ಪರ ಕಣಕ್ಕಿಳಿಯಲಿದ್ದಾರೆ. ಅಗರ್ವಾಲ್ ಅವರನ್ನು ಬರೋಬ್ಬರಿ 8.25 ಕೋಟಿ ರೂ. ನೀಡಿ ಹೈದರಾಬಾದ್ ಖರೀದಿಸಿದೆ. ಈ ಮೂಲಕ ಮಿನಿ ಹರಾಜಿನಲ್ಲಿ ಹರಾಜಿನಲ್ಲಿ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾದ ಭಾರತೀಯ ಆಟಗಾರ ಎಂಬ ಖ್ಯಾತಿಗೆ ಮಯಾಂಕ್ ಭಾಜನರಾಗಿದ್ದಾರೆ.
ಕಳೆದ ಬಾರಿ ಕೋಲ್ಕತ್ತಾ ಪರ ಆಡಿದ್ದ ಶಿವಂ ಮಾವಿ. ಮುಂದಿನ ಆವೃತ್ತಿಯಿಂದ ಗುಜರಾತ್ ಟೈಟಾನ್ಸ್ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಆಟಗಾರನನ್ನು ಹಾಲಿ ಚಾಂಪಿಯನ್ ತಂಡ 6 ಕೋಟಿ ನೀಡಿ ಖರೀದಿಸಿತು. ಇದರೊಂದಿಗೆ ಮಾವಿ, ಭಾರತದ ದುಬಾರಿ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ದೆಹಲಿ ಕ್ಯಾಪಿಟಲ್ಸ್ 5.5 ಕೋಟಿ ರೂ. ನೀಡಿ ವೇಗಿ ಮುಖೇಶ್ ಕುಮಾರ್ ಅವರನ್ನು ಖರೀದಿಸಿತು. ಇದರೊಂದಿಗೆ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾದ ಮೂರನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.
ಈ ಪಟ್ಟಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಆಲ್‌ರೌಂಡರ್ ವಿವ್ರಾಂತ್ ಶರ್ಮಾ 4ನೇ ಸ್ಥಾನದಲ್ಲಿದ್ದು, ಅವರನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡ 2.60 ಕೋಟಿ ರೂ. ನೀಡಿ ಖರೀದಿಸಿತು.
ಐಪಿಎಲ್‌ನಲ್ಲಿ ಮೊದಲ ಶತಕ ಸಿಡಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮನೀಶ್ ಪಾಂಡೆ ಈಗ ಡೆಲ್ಲಿ ತಂಡದ ಭಾಗವಾಗಿದ್ದಾರೆ. ಇವರಿಗಾಗಿ ದೆಹಲಿ 2.40 ಕೋಟಿ ರೂಪಾಯಿ ಖರ್ಚು ಮಾಡಿದೆ.
Published On - 10:49 am, Sat, 24 December 22