
IPL 2023: ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ತಂಡವು 8 ಪಂದ್ಯಗಳಲ್ಲಿ 4 ರಲ್ಲಿ ಜಯ ಸಾಧಿಸಿ, 4 ರಲ್ಲಿ ಸೋಲನುಭವಿಸಿದೆ. ಈ ನಾಲ್ಕು ಪಂದ್ಯಗಳ ಸೋಲಿಗೆ ಬಹುಮುಖ್ಯ ಕಾರಣ ಆರ್ಸಿಬಿ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ಗಳ ವೈಫಲ್ಯ. ಈ ವೈಫಲ್ಯವನ್ನು ಸರಿದೂಗಿಸುವ ಉತ್ತಮ ಅವಕಾಶ ಲಭಿಸಿದರೂ ಆರ್ಸಿಬಿ ತಂಡವು 38 ವರ್ಷದ ಆಟಗಾರನನ್ನು ಖರೀದಿಸಿ ಅಚ್ಚರಿ ಮೂಡಿಸಿದೆ.

ಹೌದು, ಗಾಯದ ಕಾರಣ ಐಪಿಎಲ್ನಿಂದ ಆರ್ಸಿಬಿ ಆಟಗಾರ ಡೇವಿಡ್ ವಿಲ್ಲಿ ಹೊರಗುಳಿದಿದ್ದಾರೆ. ಇದೀಗ ಅವರ ಬದಲಿಗೆ ಆರ್ಸಿಬಿ ಆಯ್ಕೆ ಮಾಡಿರುವುದು 38 ವರ್ಷದ ಕೇದಾರ್ ಜಾಧವ್ ಅವರನ್ನು ಎಂಬುದೇ ಅಚ್ಚರಿ. ಏಕೆಂದರೆ ಜಾಧವ್ ಅಂತಹ ಅದ್ಭುತ ಬ್ಯಾಟ್ಸ್ಮನ್ ಅಂತು ಅಲ್ಲ. ಇದಕ್ಕೆ ಸಾಕ್ಷಿಯೇ ಈ ಅಂಕಿ ಅಂಶಗಳು...

ಕೇದಾರ್ ಜಾಧವ್ ಐಪಿಎಲ್ನಲ್ಲಿ ಇದುವರೆಗೆ 93 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಕಲೆಹಾಕಿರುವುದು ಕೇವಲ 1196 ರನ್ಗಳು ಮಾತ್ರ. ಇನ್ನು ಬಾರಿಸಿರುವುದು ಕೇವಲ 4 ಅರ್ಧಶತಕಗಳು. ಅಷ್ಟೇ ಅಲ್ಲದೆ ಸ್ಪರ್ಧಾತ್ಮಕ ಕ್ರಿಕೆಟ್ನಿಂದ ದೂರ ಉಳಿದಿದ್ದ ಕಾರಣ ಅವರನ್ನು ಈ ಬಾರಿ ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ.

ಇನ್ನು ಕೊನೆಯ ಬಾರಿ ಐಪಿಎಲ್ನಲ್ಲಿ ಆಡಿದ್ದು 2021 ರಲ್ಲಿ. ಅಂದು SRH ತಂಡದಲ್ಲಿದ್ದ ಜಾಧವ್ 6 ಪಂದ್ಯಗಳಿಂದ ಕಲೆಹಾಕಿದ್ದು ಕೇವಲ 55 ರನ್ ಮಾತ್ರ. ಈ ಕಳಪೆ ಪ್ರದರ್ಶನದ ಕಾರಣ 10 ಫ್ರಾಂಚೈಸಿಗಳು ಈ ಬಾರಿ ಜಾಧವ್ ಅವರನ್ನು ಖರೀದಿಸಿರಲಿಲ್ಲ.

ಇತ್ತ ಸತತ ಎರಡು ಸೀಸನ್ಗಳಲ್ಲಿ ಅವಕಾಶ ಕೈ ತಪ್ಪಿದ ಪರಿಣಾಮ ಕೇದಾರ್ ಜಾಧವ್ ಹೊಸ ಇನಿಂಗ್ಸ್ ಆರಂಭಿಸಿದ್ದರು. ಅದರಂತೆ ಜಿಯೋ ಸಿನಿಮಾದಲ್ಲಿ ಈ ಬಾರಿ ಐಪಿಎಲ್ ಕಾಮೆಂಟ್ರಿ ಮಾಡುತ್ತಿದ್ದರು. ಮರಾಠಿ ಕಾಮೆಂಟ್ರಿ ಪ್ಯಾನೆಲ್ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಕೇದಾರ್ ಜಾಧವ್ ಅವರನ್ನು ಆರ್ಸಿಬಿ ಆಯ್ಕೆ ಮಾಡಿದೆ.

ಅಂದರೆ ಕಳೆದ ಎರಡು ವರ್ಷಗಳಿಂದ ಐಪಿಎಲ್ನಲ್ಲಿ ಕಾಣಿಸಿಕೊಳ್ಳದ ಹಾಗೂ ಕ್ರಿಕೆಟ್ನಿಂದ ದೂರ ಉಳಿದು ಕಾಮೆಂಟ್ರಿ ವೃತ್ತಿ ಆರಂಭಿಸಿದ್ದ 38 ವರ್ಷದ ಕೇದಾರ್ ಜಾಧವ್ ಅವರನ್ನು ಆರ್ಸಿಬಿ ಯಾಕಾಗಿ ಆಯ್ಕೆ ಮಾಡಿದ್ದಾರೆ ಎಂಬುದೇ ಯಕ್ಷ ಪ್ರಶ್ನೆ.

RCB ತಂಡ ಹೀಗಿದೆ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಮೈಕೆಲ್ ಬ್ರೇಸ್ವೆಲ್, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್, ಕರ್ಣ್ ಶರ್ಮಾ, ಸಿದ್ಧಾರ್ಥ್ ಕೌಲ್, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್, ವೇಯ್ನ್ ಪಾರ್ನೆಲ್, ವೈಶಾಕ್ ವಿಜಯಕುಮಾರ್, ಕೇದಾರ್ ಜಾಧವ್.