
ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಫಿಲ್ಡಿಂಗ್ ವೇಳೆ ಇಂಜುರಿಗೆ ತುತ್ತಾಗಿ ಐಪಿಎಲ್ನಿಂದ ಹೊರಬಿದ್ದಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ಗೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿದೆ. ಸ್ವತಃ ಈ ವಿಚಾರವನ್ನು ರಾಹುಲ್ ಅವರೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಮೇ 1 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದ ಎರಡನೇ ಓವರ್‌ನಲ್ಲಿ ಚೆಂಡನ್ನು ಬೆನ್ನಟ್ಟಿದ ರಾಹುಲ್, ಇದಕ್ಕಿದಂತೆ ತೊಡಿಯನ್ನು ಹಿಡಿದುಕೊಂಡು ಮೈದಾನದಲ್ಲೇ ಬಿದ್ದು ಒದ್ದಾಡಿದ್ದರು. ಕೂಡಲೇ ಅವರನ್ನು ವೈದ್ಯಕ್ಕೀಯ ಸಿಬ್ಬಂದಿಗಳ ನೆರವಿನಿಂದ ಮೈದಾನದಿಂದ ಹೊರಗೆ ಕರೆದುಕೊಂಡು ಹೋಗಿದ್ದರು.

ಸದ್ಯ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ರಾಹುಲ್ ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, "ಎಲ್ಲರಿಗೂ ನಮಸ್ಕಾರ, ನನ್ನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ನಾನು ಆರಾಮದಾಯಕವಾಗಿದ್ದೇನೆ ಮತ್ತು ಎಲ್ಲವೂ ಸುಗಮವಾಗಿ ನಡೆದಿದೆ. ನನಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ಧನ್ಯವಾದಗಳು. ನಾನು ಈಗ ಚೇತರಿಸಿಕೊಳ್ಳುವ ಹಾದಿಯಲ್ಲಿದ್ದೇನೆ. ಶೀಘ್ರದಲ್ಲೇ ಮೈದಾನಕ್ಕೆ ಹಿಂತಿರುಗಲು ನಿರ್ಧರಿಸಿದ್ದೇನೆ ಎಂದು ತಮ್ಮ ಪೋಸ್ಟ್ನಲ್ಲಿ ತಿಳಿಸಿದ್ದಾರೆ.

ಇಂಜುರಿಯಿಂದಾಗಿ ಐಪಿಎಲ್ ತೊರೆದಿರುವ ರಾಹುಲ್, ಈ ಲೀಗ್ ಬಳಿಕ ನಡೆಯಲ್ಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಿಂದಲೂ ಹೊರಬಿದ್ದಿದ್ದಾರೆ.

ಹೀಗಾಗಿ ರಾಹುಲ್ ಬದಲಿಯಾಗಿ ಮತ್ತೊಬ್ಬ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಟೀಂ ಇಂಡಿಯಾವನ್ನು ಸೇರಿಕೊಂಡಿದ್ದರೆ, ಲಕ್ನೋ ತಂಡದ ನಾಯಕತ್ವವನ್ನು ಕೃನಾಲ್ ಪಾಂಡ್ಯವಹಿಸಿಕೊಂಡಿದ್ದಾರೆ.

ಈಗ ಟೆಸ್ಟ್ ವಿಶ್ವಕಪ್ನಿಂದ ಹೊರಬಿದ್ದಿರುವ ರಾಹುಲ್ ಆ ನಂತರ, ಅಂದರೆ ಅಕ್ಟೋಬರ್ ಹಾಗೂ ನವೆಂಬರ್ನಲ್ಲಿ ನಡೆಯಲ್ಲಿರುವ ಏಕದಿನ ವಿಶ್ವಕಪ್ ವೇಳೆಗೆ ತಂಡ ಸೇರಿಕೊಳ್ಳುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.