Updated on: May 20, 2023 | 11:32 PM
IPL 2023: ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಐಪಿಎಲ್ನ 68ನೇ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ರೋಚಕ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಲಕ್ನೋ ಸೂಪರ್ ಜೈಂಟ್ಸ್ ಪ್ಲೇಆಫ್ಗೆ ಎಂಟ್ರಿ ಕೊಟ್ಟಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ತಂಡವು ಲಕ್ನೋ ಸೂಪರ್ ಜೈಂಟ್ಸ್ ಅನ್ನು ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಎಲ್ಎಸ್ಜಿ ನಿಕೋಲಸ್ ಪೂರನ್ (58) ಅವರ ಅರ್ಧಶತಕದ ನೆರವಿನೊಂದಿಗೆ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 176 ರನ್ ಕಲೆಹಾಕಿತು.
177 ರನ್ಗಳ ಸ್ಪರ್ಧಾತ್ಮಕ ಗುರಿ ಪಡೆದ ಕೆಕೆಆರ್ ತಂಡಕ್ಕೆ ಜೇಸನ್ ರಾಯ್ (44) ಉತ್ತಮ ಆರಂಭ ಒದಗಿಸಿದ್ದರು. ಇದರ ನಡುವೆ ಮಧ್ಯಮ ಕ್ರಮಾಂಕದಲ್ಲಿ ಕುಸಿತ ಕಂಡಿತು. ಇದಾಗ್ಯೂ ಕೊನೆಯ 5 ಓವರ್ಗಳಲ್ಲಿ ಗೆಲ್ಲಲು ಕೆಕೆಆರ್ಗೆ 63 ರನ್ಗಳ ಅವಶ್ಯಕೆಯಿತ್ತು.
ಈ ಹಂತದಲ್ಲಿ ರಿಂಕು ಸಿಂಗ್ ಜೊತೆಗಿದ್ದ ಆ್ಯಂಡ್ರೆ ರಸೆಲ್ (7) ರವಿ ಬಿಷ್ಣೋಯ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಇದಾಗ್ಯೂ ರಿಂಕು ಸಿಂಗ್ ಏಕಾಂಗಿ ಹೋರಾಟ ಮುಂದುವರೆಸಿದ್ದರು.
ಅದರಲ್ಲೂ ನವೀನ್ ಉಲ್ ಹಕ್ ಎಸೆದ 19ನೇ ಓವರ್ನಲ್ಲಿ 3 ಫೋರ್ ಹಾಗೂ 1 ಸಿಕ್ಸ್ನೊಂದಿಗೆ ರಿಂಕು ಸಿಂಗ್ 20 ರನ್ ಚಚ್ಚಿ ಅರ್ಧಶತಕ ಪೂರೈಸಿದರು. ಪರಿಣಾಮ ಕೊನೆಯ ಓವರ್ನಲ್ಲಿ 21 ರನ್ಗಳ ಟಾರ್ಗೆಟ್ ಪಡೆಯಿತು.
ಆದರೆ ಅಂತಿಮ ಓವರ್ನಲ್ಲಿ ರಿಂಕು ಸಿಂಗ್ (67) 2 ಭರ್ಜರಿ ಸಿಕ್ಸ್ ಹಾಗೂ 1 ಫೋರ್ನೊಂದಿಗೆ 19 ರನ್ ಬಾರಿಸಲಷ್ಟೇ ಶಕ್ತರಾದರು. ಇದರೊಂದಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡವು 1 ರನ್ನಿಂದ ರೋಚಕ ಜಯ ಸಾಧಿಸಿತು.
ಈ ಗೆಲುವಿನೊಂದಿಗೆ ಒಟ್ಟು 17 ಪಾಯಿಂಟ್ಸ್ ಕಲೆಹಾಕಿರುವ ಲಕ್ನೋ ಸೂಪರ್ ಜೈಂಟ್ಸ್ ಪ್ಲೇಆಫ್ಗೆ ಪ್ರವೇಶಿಸಿದೆ. ಇದರೊಂದಿಗೆ ಪ್ಲೇಆಫ್ ಆಡಳಿರುವ ಅಗ್ರ ಮೂರು ತಂಡಗಳು ಖಚಿತವಾಗಿದೆ.
ಇದಕ್ಕೂ ಮುನ್ನ 13 ಪಂದ್ಯಗಳಲ್ಲಿ 9 ಜಯ ಸಾಧಿಸಿರುವ ಗುಜರಾತ್ ಟೈಟಾನ್ಸ್ ತಂಡವು ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನ ಅಲಂಕರಿಸಿ ಪ್ಲೇಆಫ್ ಪ್ರವೇಶಿಸಿತ್ತು. ಅಲ್ಲದೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದು 17 ಪಾಯಿಂಟ್ಸ್ನೊಂದಿಗೆ ಸಿಎಸ್ಕೆ ತಂಡವು ಪ್ಲೇಆಫ್ ಪ್ರವೇಶಿಸಿದೆ.
ಇದೀಗ 17 ಪಾಯಿಂಟ್ಸ್ಗಳೊಂದಿಗೆ ಲಕ್ನೋ ಸೂಪರ್ ಜೈಂಟ್ಸ್ ಅಂಕಪಟ್ಟಿಯಲ್ಲಿ 3ನೇ ಸ್ಥಾನ ಅಲಂಕರಿಸಿ ಪ್ಲೇಆಫ್ಗೆ ಎಂಟ್ರಿ ಕೊಟ್ಟಿದೆ. ಇನ್ನು ನಾಲ್ಕನೇ ಸ್ಥಾನ ಮಾತ್ರ ಉಳಿದಿದ್ದು, ಈ ಸ್ಥಾನಕ್ಕಾಗಿ ಮುಂಬೈ ಇಂಡಿಯನ್ಸ್ ಹಾಗೂ ಆರ್ಸಿಬಿ ನಡುವೆ ಪೈಪೋಟಿ ಇದೆ.
ಅದರಂತೆ ಭಾನುವಾರ ಮಧ್ಯಾಹ್ನ ನಡೆಯಲಿರುವ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆದ್ದರೆ 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನ ಅಲಂಕರಿಸಬಹುದು.
ಹಾಗೆಯೇ ಭಾನುವಾರ ರಾತ್ರಿ ನಡೆಯಲಿರುವ 2ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗಲಿದ್ದು, ಈ ಪಂದ್ಯದಲ್ಲಿ ಆರ್ಸಿಬಿ ಗೆದ್ದರೆ ಉತ್ತಮ ನೆಟ್ ರನ್ ರೇಟ್ನೊಂದಿಗೆ ನಾಲ್ಕನೇ ಸ್ಥಾನಕ್ಕೇರಬಹುದು. ಈ ಮೂಲಕ ಪ್ಲೇಆಫ್ ಪ್ರವೇಶಿಸುವ ಅವಕಾಶ ಆರ್ಸಿಬಿಗಿದೆ.
ಅಂದರೆ ನಾಳಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಆರ್ಸಿಬಿ ಗೆದ್ದರೆ ಉಭಯ ತಂಡಗಳು ಒಟ್ಟು 16 ಅಂಕಗಳನ್ನು ಗಳಿಸಲಿದೆ. ಇಲ್ಲಿ ಯಾವ ತಂಡವು ಹೆಚ್ಚಿನ ರನ್ ರೇಟ್ ಹೊಂದಿರುತ್ತೆ ಆ ತಂಡಕ್ಕೆ ಪ್ಲೇಆಫ್ ಅವಕಾಶ ಸಿಗಲಿದೆ. ಹೀಗಾಗಿಯೇ ಭಾನುವಾರ ನಡೆಯಲಿರುವ ಲೀಗ್ ಹಂತದ ಕೊನೆಯ 2 ಪಂದ್ಯಗಳು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.