Updated on: May 01, 2023 | 9:42 PM
IPL 2023: ಐಪಿಎಲ್ನ 43ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆರ್ಸಿಬಿ ಆರಂಭಿಕರಾದ ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ನಾಯಕ ಬ್ಯಾಟಿಂಗ್ ಆಯ್ದುಕೊಂಡಿದ್ದರು.
ಅದರಂತೆ ಇನಿಂಗ್ಸ್ ಆರಂಭಿಸಿದ ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ಮೊದಲ 6 ಓವರ್ಗಳಲ್ಲಿ ಆರ್ಸಿಬಿ ಕಲೆಹಾಕಿದ್ದು ಕೇವಲ 42 ರನ್ಗಳು ಮಾತ್ರ.
ಅದರಲ್ಲೂ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಬೇಕಿದ್ದ ಪವರ್ಪ್ಲೇನಲ್ಲಿ ಆರ್ಸಿಬಿ ಆರಂಭಿಕರಿಂದ ಮೂಡಿಬಂದಿದ್ದು 3 ಫೋರ್ ಹಾಗೂ 1 ಸಿಕ್ಸ್ ಮಾತ್ರ. ಇಲ್ಲಿ ವಿರಾಟ್ ಕೊಹ್ಲಿ 2 ಫೋರ್ ಬಾರಿಸಿದರೆ, ಡುಪ್ಲೆಸಿಸ್ 1 ಸಿಕ್ಸ್ ಹಾಗೂ 1 ಫೋರ್ ಮಾತ್ರ ಬಾರಿಸಿದ್ದರು.
ಪವರ್ಪ್ಲೇ ಬಳಿಕ ಕೂಡ ನಿಧಾನಗತಿಯಲ್ಲೇ ರನ್ ಕಲೆಹಾಕಿದರು. ಅಲ್ಲದೆ 50 ರನ್ಗಳಿಸಲು ಬರೋಬ್ಬರಿ 44 ಎಸೆತಗಳನ್ನು ತೆಗೆದುಕೊಂಡಿದ್ದರು. ಇನ್ನು 9ನೇ ಓವರ್ನ 6ನೇ ಎಸೆತದಲ್ಲಿ ವಿರಾಟ್ ಕೊಹ್ಲಿ ರವಿ ಬಿಷ್ಣೋಯ್ ಎಸೆತದಲ್ಲಿ ಸ್ಟಂಪ್ ಔಟಾದರು.
ಆದರೆ ಅದಾಗಲೇ 30 ಎಸೆತಗಳನ್ನು ಎದುರಿಸಿದ್ದ ಕೊಹ್ಲಿ ಕಲೆಹಾಕಿದ್ದು ಮಾತ್ರ 31 ರನ್ಗಳು. ಇನ್ನು ಮೊದಲ 10 ಓವರ್ಗಳಲ್ಲಿ ಆರ್ಸಿಬಿ ಬ್ಯಾಟರ್ಗಳು ಗಳಿಸಿದ್ದು ಕೇವಲ 65 ರನ್ಗಳು ಮಾತ್ರ. ಅಂದರೆ ಪ್ರತಿ ಓವರ್ಗೆ 6.5 ರ ಸರಾಸರಿಯಲ್ಲಿ ಮಾತ್ರ ರನ್ಗಳಿಸಿದ್ದರು.
ವಿರಾಟ್ ಕೊಹ್ಲಿಯ ನಿರ್ಗಮನದ ಬಳಿಕ ಕ್ರೀಸ್ಗೆ ಆಗಮಿಸಿದ ಅನೂಜ್ ರಾವತ್ 11 ಎಸೆತಗಳಲ್ಲಿ 9 ರನ್ಗಳಿಸಿ ಕೃಷ್ಣಪ್ಪ ಗೌತಮ್ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಇಲ್ಲಿ ಮತ್ತೊಂದು ಅಚ್ಚರಿ ಎಂದರೆ 8ನೇ ಓವರ್ ಬಳಿಕ ಆರ್ಸಿಬಿ 15ನೇ ಓವರ್ವರೆಗೆ ಒಂದೇ ಒಂದು ಬೌಂಡರಿ ಬಾರಿಸಿಲ್ಲ ಎಂಬುದು.
ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್ವೆಲ್ (4) ರವಿ ಬಿಷ್ಣೋಯ್ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ನಿರ್ಗಮಿಸಿದರು. ಹಾಗೆಯೇ ಸುಯಶ್ ಪ್ರಭುದೇಸಾಯಿ 7 ಎಸೆತಗಳಲ್ಲಿ 6 ರನ್ಗಳಿಸಿ ಕ್ಯಾಚ್ ನೀಡಿ ಬಂದ ವೇಗದಲ್ಲೇ ಹಿಂತಿರುಗಿದರು. 15 ಓವರ್ ಮುಕ್ತಾಯದ ವೇಳೆಗೆ ಆರ್ಸಿಬಿ ಕಲೆಹಾಕಿದ್ದು 4 ವಿಕೆಟ್ ನಷ್ಟಕ್ಕೆ ಕೇವಲ 92 ರನ್ಗಳು. ಅಂದರೆ 90 ಎಸೆತಗಳಲ್ಲಿ 92 ರನ್ ಅಷ್ಟೇ.
ಅಲ್ಲದೆ 17ನೇ ಓವರ್ನಲ್ಲಿ ಆರ್ಸಿಬಿ ನೂರು ರನ್ ಪೂರೈಸಿತು. ಈ ಹಂತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಫಾಫ್ ಡುಪ್ಲೆಸಿಸ್ ಅಮಿತ್ ಮಿಶ್ರಾಗೆ ವಿಕೆಟ್ ಒಪ್ಪಿಸಿದರು. ಆದರೆ ಫಾಫ್ 44 ರನ್ಗಳಿಸಲು ತೆಗೆದುಕೊಂಡಿದ್ದು ಬರೋಬ್ಬರಿ 40 ಎಸೆತಗಳನ್ನು ಎಂಬುದು ಇಲ್ಲಿ ಉಲ್ಲೇಖಾರ್ಹ.
ಇದರ ಬೆನ್ನಲ್ಲೇ 4 ಎಸೆತಗಳಲ್ಲಿ 3 ರನ್ಗಳಿಸಿ ಮಹಿಪಾಲ್ ಲೋಮ್ರರ್ ನವೀನ್ ಉಲ್ ಹಕ್ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ನಿರ್ಗಮಿಸಿದರು. ಇನ್ನು 19ನೇ ಓವರ್ನ 4ನೇ ಎಸೆತದಲ್ಲಿ ಬೌಲರ್ ಯಶ್ ಠಾಕೂರ್ ದಿನೇಶ್ ಕಾರ್ತಿಕ್ (16) ಅವರನ್ನು ರನೌಟ್ ಮಾಡಿದರು. ಹಾಗೆಯೇ 20ನೇ ಓವರ್ನ 2ನೇ ಎಸೆತದಲ್ಲಿ ಕರ್ಣ್ ಶರ್ಮಾ (2) ಹಾಗೂ ಇದರ ಬೆನ್ನಲ್ಲೇ ಸಿರಾಜ್ (0) ನವೀನ್ ಉಲ್ ಹಕ್ಗೆ ವಿಕೆಟ್ ಒಪ್ಪಿಸಿದರು.
ಅಂತಿಮವಾಗಿ ಆರ್ಸಿಬಿ ತಂಡವು ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 126 ರನ್ಗಳಿಸಲಷ್ಟೇ ಶಕ್ತರಾದರು.
ಅಂದಹಾಗೆ ಈ ಪಂದ್ಯದಲ್ಲಿ ಆರ್ಸಿಬಿ ಬ್ಯಾಟ್ಸ್ಮನ್ಗಳು ಬಾರಿಸಿದ್ದು ಕೇವಲ 8 ಬೌಂಡರಿಗಳು ಮಾತ್ರ. ಇದರಲ್ಲಿ 6 ಫೋರ್ಗಳು ಹಾಗೂ ಫಾಫ್ ಮತ್ತು ಡಿಕೆ ಬ್ಯಾಟ್ನಿಂದ ಮೂಡಿಬಂದ 2 ಸಿಕ್ಸ್ಗಳು ಸೇರಿವೆ.