Updated on: Apr 20, 2023 | 8:30 PM
IPL 2023: ಮೊಹಾಲಿಯಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಆರ್ಸಿಬಿ ತಂಡವು ಗೆಲುವಿನ ಲಯಕ್ಕೆ ಮರಳಿದೆ. ಈ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಆಟಗಾರರೆಂದರೆ ಫಾಫ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ ಹಾಗೂ ಮೊಹಮ್ಮದ್ ಸಿರಾಜ್.
ಆರಂಭಿಕರಾಗಿ ಕಣಕ್ಕಿಳಿದ ಫಾಫ್ ಡುಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ 137 ರನ್ಗಳ ಜೊತೆಯಾಟವಾಡುವ ಮೂಲಕ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದ್ದರು. ಅಷ್ಟೇ ಅಲ್ಲದೆ ಕೊಹ್ಲಿ 59 ರನ್ ಬಾರಿಸಿದರೆ, ಫಾಫ್ ಡುಪ್ಲೆಸಿಸ್ 56 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್, 5 ಫೋರ್ನೊಂದಿಗೆ 84 ರನ್ ಕಲೆಹಾಕಿದರು.
ಈ 84 ರನ್ಗಳೊಂದಿಗೆ ಇದೀಗ ಫಾಫ್ ಡುಪ್ಲೆಸಿಸ್ ಅವರ ವೈಯುಕ್ತಿಕ ಸ್ಕೋರ್ 300 ರ ಗಡಿದಾಟಿದೆ. ಈ ಮೂಲಕ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಆರ್ಸಿಬಿ ನಾಯಕ ಅಗ್ರಸ್ಥಾನದಲ್ಲಿದ್ದಾರೆ.
ಫಾಫ್ ಡುಪ್ಲೆಸಿಸ್ 6 ಪಂದ್ಯಗಳಿಂದ ಒಟ್ಟು 343 ರನ್ ಕಲೆಹಾಕಿದ್ದಾರೆ. ಈ ವೇಳೆ 4 ಅರ್ಧಶತಕಗಳು, 25 ಫೋರ್ಗಳು ಹಾಗೂ 23 ಸಿಕ್ಸ್ಗಳು ಬ್ಯಾಟ್ನಿಂದ ಮೂಡಿಬಂದಿವೆ. ಇದೀಗ ಆರೆಂಜ್ ಕ್ಯಾಪ್ ಧರಿಸಿರುವ ಡುಪ್ಲೆಸಿಸ್ ಮುಂದಿನ ಪಂದ್ಯಗಳಲ್ಲೂ ತಮ್ಮ ಭರ್ಜರಿ ಫಾರ್ಮ್ ಮುಂದುವರೆಸುವ ವಿಶ್ವಾಸದಲ್ಲಿದ್ದಾರೆ.
ಇನ್ನು ಮೊಹಾಲಿಯಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮಾರಕ ದಾಳಿ ಸಂಘಟಿಸಿದ ಮೊಹಮ್ಮದ್ ಸಿರಾಜ್ 4 ಓವರ್ಗಳಲ್ಲಿ ಕೇವಲ 21 ರನ್ ನೀಡಿ 4 ವಿಕೆಟ್ ಕಬಳಿಸಿದ್ದರು. ಈ ನಾಲ್ಕು ವಿಕೆಟ್ಗಳೊಂದಿಗೆ ಸಿರಾಜ್ ಅವರ ಒಟ್ಟು ವಿಕೆಟ್ 12 ಕ್ಕೇರಿದೆ.
ಈ ಬಾರಿ ಒಟ್ಟು 6 ಪಂದ್ಯಗಳಲ್ಲಿ ಬೌಲಿಂಗ್ ಮಾಡಿರುವ ಮೊಹಮ್ಮದ್ ಸಿರಾಜ್ 24 ಓವರ್ಗಳಲ್ಲಿ 161 ರನ್ ನೀಡಿ 12 ವಿಕೆಟ್ ಕಬಳಿಸಿದ್ದಾರೆ. ಈ ಭರ್ಜರಿ ಪ್ರದರ್ಶನದ ಮೂಲಕ ಪರ್ಪಲ್ ಕ್ಯಾಪ್ ಧರಿಸಿದ್ದಾರೆ.
ಸದ್ಯ ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಸಿರಾಜ್ ಅಗ್ರಸ್ಥಾನದಲ್ಲಿದ್ದು, ನಂತರದ ಸ್ಥಾನದಲ್ಲಿ 11 ವಿಕೆಟ್ ಕಬಳಿಸಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾರ್ಕ್ ವುಡ್, ಗುಜರಾತ್ ಟೈಟಾನ್ಸ್ ತಂಡದ ರಶೀದ್ ಖಾನ್, ರಾಜಸ್ಥಾನ್ ರಾಯಲ್ಸ್ ತಂಡದ ಯುಜ್ವೇಂದ್ರ ಚಹಾಲ್ ಇದ್ದಾರೆ. ಹೀಗಾಗಿ ಮುಂಬರುವ ಪಂದ್ಯಗಳಲ್ಲಿ ಪರ್ಪಲ್ ಕ್ಯಾಪ್ಗಾಗಿ ಭರ್ಜರಿ ಪೈಪೋಟಿ ಕಂಡು ಬರಲಿದೆ.
ಪರ್ಪಲ್ ಕ್ಯಾಪ್, ಆರೆಂಜ್ ಕ್ಯಾಪ್ನೊಂದಿಗೆ ಮೊಹಮ್ಮದ್ ಸಿರಾಜ್ ಹಾಗೂ ಫಾಫ್ ಡುಪ್ಲೆಸಿಸ್