Updated on: Mar 25, 2023 | 9:33 PM
ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೂ ಮುನ್ನವೇ ಪಂಜಾಬ್ ಕಿಂಗ್ಸ್ ತಂಡದಿಂದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಜಾನಿ ಬೈರ್ಸ್ಟೋವ್ ಹೊರಬಿದ್ದಿದ್ದಾರೆ. ಪಾದದ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಬೈರ್ಸ್ಟೋವ್ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ ಐಪಿಎಲ್ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.
ಅತ್ತ ಇಂಗ್ಲೆಂಡ್ ಆಟಗಾರ ಜಾನಿ ಬೈರ್ಸ್ಟೋವ್ ಐಪಿಎಲ್ನಿಂದ ಹೊರಬೀಳುತ್ತಿದ್ದಂತೆ ಇತ್ತ ಪಂಜಾಬ್ ಕಿಂಗ್ಸ್ ತಂಡಕ್ಕೆ ಆಸ್ಟ್ರೇಲಿಯಾ ಆಟಗಾರ ಎಂಟ್ರಿ ಕೊಟ್ಟಿದ್ದಾರೆ. ಬೈರ್ಸ್ಟೋವ್ ಬದಲಿಗೆ ಪಂಜಾಬ್ ಫ್ರಾಂಚೈಸಿ ಆಸೀಸ್ ಆಲ್ರೌಂಡರ್ ಮ್ಯಾಥ್ಯೂ ಶಾರ್ಟ್ ಅವರನ್ನು ಆಯ್ಕೆ ಮಾಡಿದೆ.
27 ವರ್ಷದ ಮ್ಯಾಥ್ಯೂ ಶಾರ್ಟ್ 2022-23 ಬಿಗ್ ಬ್ಯಾಷ್ ಲೀಗ್ನಲ್ಲಿ (BBL) ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಅಡಿಲೇಡ್ ಸ್ಟ್ರೈಕರ್ಸ್ ಪರ ಕಣಕ್ಕಿಳಿದಿದ್ದ ಶಾರ್ಟ್ 14 ಪಂದ್ಯಗಳಿಂದ 458 ರನ್ ಕಲೆಹಾಕಿದ್ದರು.
ಹಾಗೆಯೇ ಸ್ಪಿನ್ ಬೌಲಿಂಗ್ ಮೂಲಕ 11 ವಿಕೆಟ್ ಕಬಳಿಸಿ ಮಿಂಚಿದ್ದರು. ಇದೇ ಕಾರಣದಿಂದಾಗಿ ಇದೀಗ ಮ್ಯಾಥ್ಯೂ ಶಾರ್ಟ್ಗೆ ಐಪಿಎಲ್ನಲ್ಲಿ ಅವಕಾಶ ಲಭಿಸಿದೆ.
ಇನ್ನು ಇದುವರೆಗೆ 67 ಟಿ20 ಪಂದ್ಯಗಳನ್ನಾಡಿರುವ ಶಾರ್ಟ್ ಒಟ್ಟು 1409 ರನ್ ಗಳಿಸಿದ್ದಾರೆ. ಹಾಗೆಯೇ ಬೌಲಿಂಗ್ನಲ್ಲಿ 7.31 ರ ಎಕಾನಮಿ ರೇಟ್ನಲ್ಲಿ ಒಟ್ಟು 22 ವಿಕೆಟ್‌ಗಳನ್ನು ಪಡೆದಿದ್ದಾರೆ. ಹೀಗಾಗಿ ಪಂಜಾಬ್ ಕಿಂಗ್ಸ್ ತಂಡವು ಆಸ್ಟ್ರೇಲಿಯಾ ಆಟಗಾರನನ್ನು ಆಲ್ರೌಂಡರ್ ಆಗಿ ಕಣಕ್ಕಿಳಿಸಬಹುದು.
ಪಂಜಾಬ್ ಕಿಂಗ್ಸ್ ತಂಡವು ತನ್ನ ಮೊದಲ ಪಂದ್ಯವನ್ನು ಏಪ್ರಿಲ್ 1 ರಂದು ಆಡಲಿದ್ದು, ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣಸಲಿದೆ.
ಪಂಜಾಬ್ ಕಿಂಗ್ಸ್ ತಂಡ ಹೀಗಿದೆ: ಶಿಖರ್ ಧವನ್ (ನಾಯಕ), ಶಾರುಖ್ ಖಾನ್, ಪ್ರಭ್ ಸಿಮ್ರಾನ್ ಸಿಂಗ್, ಭಾನುಕಾ ರಾಜಪಕ್ಸೆ, ಜಿತೇಶ್ ಶರ್ಮಾ, ರಿಷಿ ಧವನ್, ಲಿಯಾಮ್ ಲಿವಿಂಗ್‌ಸ್ಟೋನ್, ಅಥರ್ವ ಥೈಡೆ, ಅರ್ಷ್‌ದೀಪ್ ಸಿಂಗ್, ಬಲ್ತೇಜ್ ಸಿಂಗ್, ನಾಥನ್ ಎಲ್ಲಿಸ್, ಕಗಿಸೊ ರಬಾಡ, ರಾಹುಲ್ ಚಾಹರ್, ಹರ್‌ಪ್ರೀತ್ ಬ್ರಾರ್, ಶಿವಂ ಸಿಂಗ್, ಮೋಹಿತ್ ರಥಿ, ವಿದ್ವತ್ ಕಾವೇರಪ್ಪ, ಹರ್‌ಪ್ರೀತ್ ಭಾಟಿಯಾ, ಸಿಕಂದರ್ ರಾಝ, ಸ್ಯಾಮ್ ಕರನ್, ಮ್ಯಾಥ್ಯೂ ಶಾರ್ಟ್, ಗುರ್ನೂರ್ ಸಿಂಗ್ ಬ್ರಾರ್.