
IPL 2023: ಐಪಿಎಲ್ ಸೀಸನ್ 16 ಇನ್ನೇನು ಮುಗಿಯಲಿದೆ ಅನ್ನುವಷ್ಟರಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿಗಳು ಹರಿದಾಡಲಾರಂಭಿಸಿದೆ. ಈ ಸುದ್ದಿಗಳನ್ನು ಪುಷ್ಠೀಕರಿಸುವಂತಹ ಸನ್ನಿವೇಶಗಳು ಕೂಡ ಕಂಡು ಬರಲಾರಂಭಿಸಿದೆ.

ಹೌದು, ಕೆಲ ದಿನಗಳ ಹಿಂದೆ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ಬಳಿಕ ಮಹೇಂದ್ರ ಸಿಂಗ್ ಧೋನಿ ಹಾಗೂ ರವೀಂದ್ರ ಜಡೇಜಾ ನಡುವೆ ಮೈದಾನದಲ್ಲೇ ವಾಕ್ಸಮರ ನಡೆದಿತ್ತು. ಎಲ್ಲಾ ಆಟಗಾರರು ಪ್ಲೇಆಫ್ ಪ್ರವೇಶಿಸಿದ ಸಂಭ್ರಮದಲ್ಲಿದ್ದರೆ ಇತ್ತ ಧೋನಿ ಜಡೇಜಾಗೆ ಕ್ಲಾಸ್ ತೆಗೆದುಕೊಂಡಿದ್ದರು.

ಅಲ್ಲದೆ ಸಿಎಸ್ಕೆ ನಾಯಕನ ಮಾತುಗಳನ್ನು ಆಲಿಸುತ್ತಿದ್ದ ಜಡೇಜಾ ಅವರ ಮುಖದಲ್ಲಿ ಯಾವುದೇ ನಗು ಇರಲಿಲ್ಲ. ಅಲ್ಲದೆ ನಿರಾಶಭಾವದೊಂದಿಗೆ ಅವರು ಡಗೌಟ್ಗೆ ತೆರಳಿದ್ದರು. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೇ ಜಡೇಜಾ ಸೋಷಿಯಲ್ ಮೀಡಿಯಾದಲ್ಲಿ ಕರ್ಮ ರಿಟರ್ನ್ಸ್ ಎನ್ನುವ ಪೋಸ್ಟ್ ಹಂಚಿಕೊಂಡಿದ್ದರು.

ಕರ್ಮವು ನಿಮ್ಮ ಬಳಿಗೆ ಬಂದೇ ಬರುತ್ತದೆ. ಅದು ಬೇಗನೆ ಬರಬಹುದು ಅಥವಾ ತಡವಾಗಬಹುದು. ಆದರೆ ಅದು ಖಂಡಿತವಾಗಿಯೂ ಬಂದೇ ಬರುತ್ತದೆ ಎಂಬ ಪೋಸ್ಟ್ ಅನ್ನು ಜಡೇಜಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಈ ಪೋಸ್ಟ್ ಅನ್ನು ಶೇರ್ ಮಾಡಿರುವ ಜಡೇಜಾ ಅವರ ಪತ್ನಿ ರಿವಾಬಾ..ನಿಮ್ಮ ಸ್ವಂತ ಹಾದಿಯನ್ನು ಅನುಸರಿಸಿ ಎಂದು ಬರೆದುಕೊಂಡಿದ್ದರು.

ಇದು ಅಲ್ಲಿಗೆ ಮುಗಿಯಿತು ಅಂದುಕೊಂಡರೆ, ಐಪಿಎಲ್ ಮೊದಲ ಕ್ವಾಲಿಫೈಯರ್ ಪಂದ್ಯದ ಬಳಿಕ ಮತ್ತೊಂದು ಘಟನೆ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂ ಸಾಕ್ಷಿಯಾಯಿತು. ಗುಜರಾತ್ ಟೈಟಾನ್ಸ್ ವಿರುದ್ಧ ಸಿಎಸ್ಕೆ ಗೆದ್ದ ಬಳಿಕ ಎಲ್ಲರೂ ಸಂಭ್ರಮದಲ್ಲಿದ್ದರೆ, ಇತ್ತ ರವೀಂದ್ರ ಜಡೇಜಾ ಏಕಾಂಗಿಯಾಗಿ ತೆರಳಿದ್ದರು.

ಇದೇ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಇಒ ಕಾಸಿ ವಿಶ್ವನಾಥನ್ ಅವರು ಜಡೇಜಾ ಅವರನ್ನು ಸಮಾಧಾನಪಡಿಸಲು ಮುಂದಾಗಿದ್ದಾರೆ. ಕೆಲ ಕ್ಷಣಗಳ ಕಾಲ ಕಾಸಿ ವಿಶ್ವನಾಥನ್ ಅವರು ಜಡೇಜಾ ಜೊತೆ ಮಾತನಾಡಿದರು.

ಆದರೆ ಸಿಎಸ್ಕೆ ಸಿಇಒ ಅವರ ಮಾತುಗಳನ್ನು ಆಲಿಸಿದ ಜಡೇಜಾ ನಿರಾಸಕ್ತಿಯಿಂದಲೇ ಸಾಗಿದರು. ಇದೀಗ ಎಲ್ಲಾ ಆಟಗಾರರು ಫೈನಲ್ ಪ್ರವೇಶಿಸಿದ ಸಂಭ್ರಮದಲ್ಲಿರುವಾಗ ಕಾಸಿ ವಿಶ್ವನಾಥನ್ ಅವರು ಜಡೇಜಾ ಅವರನ್ನು ಸಮಾಧಾನಪಡಿಸುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದರ ಬೆನ್ನಲ್ಲೇ ಸಿಎಸ್ಕೆ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಮತ್ತೆ ಕೇಳಿ ಬರಲಾರಂಭಿಸಿದೆ. ಏಕೆಂದರೆ ಈ ಹಿಂದೆ ಕೂಡ ಜಡೇಜಾ ಸಿಎಸ್ಕೆ ಫ್ರಾಂಚೈಸಿ ಜೊತೆ ಮುನಿಸಿಕೊಂಡಿದ್ದರು. ಇದಕ್ಕೆ ಮುಖ್ಯ ಕಾರಣ ಕಳೆದ ಸೀಸನ್ನಲ್ಲಿ ನಾಯಕತ್ವ ನೀಡಿ ಕೆಲ ಪಂದ್ಯಗಳ ಬಳಿಕ ಕಪ್ತಾನನ ಸ್ಥಾನದಿಂದ ಕೆಳಗಿಳಿಸಿದ್ದು.

ಇದಾದ ಬಳಿಕ ಜಡೇಜಾ ಸಿಎಸ್ಕೆ ಪರ ಆಡುವುದಿಲ್ಲ ಎಂಬ ಸುದ್ದಿಗಳು ಕೂಡ ಹರಿದಾಡಿದ್ದವು. ಅಂತಿಮವಾಗಿ ಸಿಎಸ್ಕೆ ಫ್ರಾಂಚೈಸಿಯು ಸ್ಟಾರ್ ಆಲ್ರೌಂಡರ್ನ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಐಪಿಎಲ್ನ ಮುಕ್ತಾಯದ ಹಂತದಲ್ಲೇ ರವೀಂದ್ರ ಜಡೇಜಾ ಹಾಗೂ ಸಿಎಸ್ಕೆ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿಗಳು ಕೇಳಿ ಬರಲಾರಂಭಿಸಿರುವುದು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.