
IPL 2023 RCB: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗದ ಬೌಲರ್ ರೀಸ್ ಟೋಪ್ಲಿ ಬುಧವಾರ ತಮ್ಮ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಹೀಗಾಗಿ ಅವರು ಕೆಲ ತಿಂಗಳುಗಳ ಕಾಲ ಮೈದಾನದಿಂದ ಹೊರಗುಳಿಯುವುದು ಖಚಿತವಾಗಿದೆ.

ಈ ಬಾರಿಯ ಐಪಿಎಲ್ನಲ್ಲಿ ಹರಾಜಿನಲ್ಲಿ ಆರ್ಸಿಬಿ ಫ್ರಾಂಚೈಸಿ ಇಂಗ್ಲೆಂಡ್ ವೇಗಿ ರೀಸ್ ಟೋಪ್ಲಿ ಅವರನ್ನು ಬರೋಬ್ಬರಿ 1.9 ಕೋಟಿಗೆ ಖರೀದಿಸಿತ್ತು. ಅದರಂತೆ ಮುಂಬೈ ಇಂಡಿಯನ್ಸ್ ವಿರುದ್ಧ ಚೊಚ್ಚಲ ಐಪಿಎಲ್ ಪಂದ್ಯವಾಡಿದ್ದ ಟೋಪ್ಲಿ 2 ಓವರ್ಗಳಲ್ಲಿ 14 ರನ್ ನೀಡಿ 1 ವಿಕೆಟ್ ಪಡೆದಿದ್ದರು.

ಆದರೆ ಇದೇ ಪಂದ್ಯದ ಫೀಲ್ಡಿಂಗ್ ವೇಳೆ ಟೋಪ್ಲಿ ಅವರ ಭುಜಕ್ಕೆ ಬಲವಾದ ಗಾಯವಾಗಿತ್ತು. ಗಾಯವು ಗಂಭೀರವಾಗಿದ್ದ ಕಾರಣ ಅವರು ಅರ್ಧದಲ್ಲೇ ಐಪಿಎಲ್ ತೊರೆದಿದ್ದರು. ಇದೀಗ ಇಂಗ್ಲೆಂಡ್ನಲ್ಲಿ ಭುಜದ ಗಾಯಕ್ಕೆ ಸರ್ಜರಿ ಮಾಡಿಸಿಕೊಂಡಿದ್ದೇನೆ ಎಂದು ರೀಸ್ ಟೋಪ್ಲಿ ಸೋಷಿಯ್ ಮೀಡಿಯಾದಲ್ಲಿ ತಿಳಿಸಿದ್ದಾರೆ.

ಇದೀಗ ಟೋಪ್ಲಿ ಅವರ ಫೋಟೋಗೆ ಪ್ರತಿಕ್ರಿಯಿಸಿರುವ ಆರ್ಸಿಬಿ ಅಭಿಮಾನಿಗಳು, ಶೀಘ್ರದಲ್ಲೇ ಗುಣಮುಖರಾಗಲಿ ಹಾರೈಸಿದ್ದಾರೆ. ಅಲ್ಲದೆ ಮುಂದಿನ ವರ್ಷ ಕೂಡ ಆರ್ಸಿಬಿ ಪರವೇ ನೀವು ಕಣಕ್ಕಿಳಿಯುವಂತಾಗಲಿ ಎಂದು ಕೆಲ ಅಭಿಮಾನಿಗಳು ಆಶಿಸಿದ್ದಾರೆ.

ಐಪಿಎಲ್ 2023 ರಿಂದ ರೀಸ್ ಟೋಪ್ಲಿ ಹೊರಗುಳಿದಿದ್ದು, ಹೀಗಾಗಿ ಅವರ ಬದಲಿಗೆ ಸೌತ್ ಆಫ್ರಿಕಾದ ಎಡಗೈ ವೇಗಿ ವೇಯ್ನ್ ಪಾರ್ನೆಲ್ ಅವರನ್ನು ಆಯ್ಕೆ ಮಾಡಲಾಗಿದೆ. ಹಾಗೆಯೇ ಪಾದದ ನೋವಿನ ಸಮಸ್ಯೆಯ ಕಾರಣ ರಜತ್ ಪಾಟಿದಾರ್ ಕೂಡ ತಂಡದಿಂದ ಹೊರಗುಳಿದಿದ್ದು, ಅವರ ಬದಲಿಗೆ ಕರ್ನಾಟಕದ ವೇಗಿ ವೈಶಾಖ್ ವಿಜಯಕುಮಾರ್ ಸ್ಥಾನ ಪಡೆದಿದ್ದಾರೆ.

ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ತಂಡವು ಶುಭಾರಂಭ ಮಾಡಿದ್ದರೂ, 2ನೇ ಮತ್ತು 3ನೇ ಪಂದ್ಯಗಳಲ್ಲಿ ಸೋಲನುಭವಿಸಿದೆ. ಇದೀಗ ಶನಿವಾರ ನಡೆಯಲಿರುವ 4ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದ್ದು, ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಗೆಲುವಿನ ಲಯಕ್ಕೆ ಮರಳುವ ಇರಾದೆಯಲ್ಲಿದೆ ಆರ್ಸಿಬಿ.

RCB ತಂಡ ಹೀಗಿದೆ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಮೈಕೆಲ್ ಬ್ರೇಸ್ವೆಲ್, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್, ಕರ್ಣ್ ಶರ್ಮಾ, ಸಿದ್ಧಾರ್ಥ್ ಕೌಲ್, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್, ವೇಯ್ನ್ ಪಾರ್ನೆಲ್, ವೈಶಾಖ್ ವಿಜಯಕುಮಾರ್.