Updated on: Apr 16, 2023 | 8:31 PM
IPL 2023 RCB vs CSK: ಐಪಿಎಲ್ನ ಹೈವೋಲ್ಟೇಜ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಸೋಮವಾರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್ನ 24ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ.
ಉಭಯ ತಂಡಗಳ ಅಭಿಮಾನಿಗಳಿಗೆ ಪ್ರತಿಷ್ಠಿತ ವಿಷಯವಾಗಿರುವ ಈ ಪಂದ್ಯದಲ್ಲಿ ಯಾರು ಗೆಲ್ಲಲಿದ್ದಾರೆ ಎಂಬ ಲೆಕ್ಕಚಾರಗಳು ಈಗಾಗಲೇ ಶುರುವಾಗಿದೆ. ಇಲ್ಲಿ ಮೇಲ್ನೋಟಕ್ಕೆ ಎರಡೂ ತಂಡಗಳು ಬಲಿಷ್ಠವಾಗಿದ್ದರೂ ಅಂಕಿ ಅಂಶಗಳು ಹೇಳೋದೇ ಬೇರೆ.
ಅಂದರೆ ಆರ್ಸಿಬಿ ಹಾಗೂ ಸಿಎಸ್ಕೆ ತಂಡಗಳು ಐಪಿಎಲ್ನಲ್ಲಿ ಒಟ್ಟು 30 ಬಾರಿ ಮುಖಾಮುಖಿಯಾಗಿದೆ. ಈ ವೇಳೆ ಆರ್ಸಿಬಿ ಗೆದ್ದಿರುವುದು ಕೇವಲ 10 ಬಾರಿ ಮಾತ್ರ. ಇನ್ನು ಒಂದು ಪಂದ್ಯವು ರದ್ದಾಗಿತ್ತು. ಅಂದರೆ 30 ಪಂದ್ಯಗಳಲ್ಲಿ 19 ಬಾರಿ ಜಯ ಸಾಧಿಸಿರುವ ಸಿಎಸ್ಕೆ ತಂಡವು ಮೇಲುಗೈ ಹೊಂದಿದೆ.
ಇದಾಗ್ಯೂ ಕಳೆದ ಸೀಸನ್ನಲ್ಲಿ ಆರ್ಸಿಬಿ ತಂಡವು ಚೆನ್ನೈ ವಿರುದ್ಧ ಅತ್ಯುತ್ತಮ ಪ್ರದರ್ಶನವನ್ನೇ ನೀಡಿತ್ತು. ಐಪಿಎಲ್ 2022 ರಲ್ಲಿ ಮೊದಲ ಪಂದ್ಯದಲ್ಲಿ ಸಿಎಸ್ಕೆ 23 ರನ್ಗಳಿಂದ ಜಯಗಳಿಸಿದರೆ, 2ನೇ ಪಂದ್ಯದಲ್ಲಿ 13 ರನ್ಗಳಿಂದ ಗೆದ್ದು ಆರ್ಸಿಬಿ ಸೇಡು ತೀರಿಸಿಕೊಂಡಿತ್ತು.
ಈ ಬಾರಿ ಕೂಡ ಆರ್ಸಿಬಿ ಗೆಲ್ಲುವ ವಿಶ್ವಾಸದಲ್ಲಿದೆ. ಏಕೆಂದರೆ ಈ ಸಲ ಪಂದ್ಯ ನಡೆಯುತ್ತಿರುವುದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ. ಇಲ್ಲಿ ಆಡಲಾಗಿರುವ 3 ಪಂದ್ಯಗಳಲ್ಲೂ ಆರ್ಸಿಬಿ ಅತ್ಯುತ್ತಮ ಪ್ರದರ್ಶನವನ್ನೇ ನೀಡಿದೆ. ಚಿನ್ನಸ್ವಾಮಿ ಪಿಚ್ನಲ್ಲಿ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದರೆ, 2ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 1 ವಿಕೆಟ್ನಿಂದ ವಿರೋಚಿತ ಸೋಲೋಪ್ಪಿಕೊಂಡಿತು. ಇನ್ನು 3ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 23 ರನ್ಗಳ ಭರ್ಜರಿ ಜಯ ಸಾಧಿಸಿತು.
ಇದೀಗ ಡೆಲ್ಲಿ ವಿರುದ್ಧದ ಗೆಲುವಿನ ಲಯದಲ್ಲಿರುವ ಆರ್ಸಿಬಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲ್ಲುವ ಆತ್ಮವಿಶ್ವಾಸದಲ್ಲಿದೆ. ಅತ್ತ ಸಿಎಸ್ಕೆ ತಂಡವು ಕೊನೆಯ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ದ ಪರಾಜಯಗೊಂಡಿದ್ದು, ಹೀಗಾಗಿ ಈ ಪಂದ್ಯದ ಮೂಲಕ ಗೆಲುವಿನ ಲಯಕ್ಕೆ ಮರಳುವ ತವಕದಲ್ಲಿದೆ.
ಒಟ್ಟಿನಲ್ಲಿ ಅಂಕಿ ಅಂಶಗಳ ಪ್ರಕಾರ ಸಿಎಸ್ಕೆ ತಂಡವು ಮೇಲುಗೈ ಹೊಂದಿದ್ದರೂ, ಪ್ರಸ್ತುತ ಆರ್ಸಿಬಿ ತಂಡದ ಫಾರ್ಮ್ ಗಮನಿಸಿದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೇ ಬಲಿಷ್ಠ ಎನ್ನಬಹುದು.