Updated on: Apr 06, 2023 | 9:20 PM
IPL 2023: ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಐಪಿಎಲ್ನ 9ನೇ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಕೆಕೆಆರ್ ತಂಡದ ಸ್ಪಿನ್ನರ್ ಸುನಿಲ್ ನರೈನ್ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಆರ್ಸಿಬಿ ವಿರುದ್ಧದ ಈ ಪಂದ್ಯದಲ್ಲಿ ಕಣಕ್ಕಿಳಿಯುವುದರೊಂದಿಗೆ ಕೆಕೆಆರ್ ಪರ 150 ಪಂದ್ಯಗಳನ್ನಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಸುನಿಲ್ ನರೈನ್ ಪಾತ್ರರಾದರು.
2012 ರಿಂದ ಐಪಿಎಲ್ ಆಡುತ್ತಿರುವ ಸುನಿಲ್ ನರೈನ್ ಕೇವಲ ಕೆಕೆಆರ್ ಪರ ಮಾತ್ರ ಕಣಕ್ಕಿಳಿದಿದ್ದಾರೆ. ಅಲ್ಲದೆ ಇದೀಗ ಕೆಕೆಆರ್ ತಂಡದ ಪರ 150 ಪಂದ್ಯಗಳನ್ನು ಪೂರೈಸುವ ಮೂಲಕ ಐಪಿಎಲ್ನಲ್ಲಿ ಒಂದೇ ತಂಡದ ಪರ 150 ಪಂದ್ಯಗಳನ್ನಾಡಿದ 7ನೇ ಆಟಗಾರ ಎನಿಸಿಕೊಂಡರು.
ಹಾಗಿದ್ರೆ ಐಪಿಎಲ್ನಲ್ಲಿ ಒಂದೇ ತಂಡದ ಪರ ಅತೀ ಹೆಚ್ಚು ಪಂದ್ಯಗಳನ್ನಾಡಿದ ಆಟಗಾರರು ಯಾರೆಲ್ಲಾ ಎಂದು ನೋಡೋಣ...
1- ವಿರಾಟ್ ಕೊಹ್ಲಿ: 2008 ರಿಂದ ಆರ್ಸಿಬಿ ಪರ ಕಣಕ್ಕಿಳಿಯುತ್ತಿರುವ ವಿರಾಟ್ ಕೊಹ್ಲಿ ಇದುವರೆಗೆ 225 ಪಂದ್ಯಗಳನ್ನಾಡಿದ್ದಾರೆ. ಈ ಮೂಲಕ ಐಪಿಎಲ್ನಲ್ಲಿ ಒಂದೇ ತಂಡದ ಪರ ಅತ್ಯಧಿಕ ಪಂದ್ಯಗಳನ್ನಾಡಿದ ವಿಶೇಷ ದಾಖಲೆ ಹೊಂದಿದ್ದಾರೆ.
2- ಎಂಎಸ್ ಧೋನಿ: ಚೆನ್ನೈ ಸೂಪರ್ ಕಿಂಗ್ಸ್ ಪರ ಮಹೇಂದ್ರ ಸಿಂಗ್ ಧೋನಿ ಒಟ್ಟು 206 ಪಂದ್ಯಗಳನ್ನಾಡುವ ಮೂಲಕ ಈ ಪಟ್ಟಿಯಲ್ಲಿ 2ನೇ ಸ್ಥಾನ ಅಲಂಕರಿಸಿದ್ದಾರೆ.
3- ಕೀರನ್ ಪೊಲಾರ್ಡ್: ಮುಂಬೈ ಇಂಡಿಯನ್ಸ್ ಮಾತ್ರ 189 ಪಂದ್ಯಗಳನ್ನು ಆಡಿದ್ದ ಕೀರನ್ ಪೊಲಾರ್ಡ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
4- ರೋಹಿತ್ ಶರ್ಮಾ: ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಪರ ಮಾತ್ರ 183 ಪಂದ್ಯಗಳನ್ನಾಡಿದ್ದಾರೆ.
5- ಸುರೇಶ್ ರೈನಾ: ಸಿಎಸ್ಕೆ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಚೆನ್ನೈ ಸೂಪರ್ ಕಿಂಗ್ಸ್ ಪರ 176 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು.
6- ಎಬಿ ಡಿವಿಲಿಯರ್ಸ್: ಎಬಿಡಿ ಆರ್ಸಿಬಿ ಪರ ಮಾತ್ರ ಒಟ್ಟು 156 ಪಂದ್ಯಗಳಲ್ಲಿ ಕಣಕ್ಕಿಳಿದು ಈ ಪಟ್ಟಿಯಲ್ಲಿ 6ನೇ ಸ್ಥಾನ ಅಲಂಕರಿಸಿದ್ದಾರೆ.
7- ಸುನಿಲ್ ನರೈನ್: ಕೆಕೆಆರ್ ಪರ 150 ಪಂದ್ಯಗಳಲ್ಲಿ ಕಣಕ್ಕಿಳಿಯುವ ಮೂಲಕ ಸುನಿಲ್ ನರೈನ್ ಇದೀಗ ಹೊಸ ಇತಿಹಾಸ ನಿರ್ಮಿಸಿದ್ದಾರೆ.