ಐಪಿಎಲ್ ಆರಂಭವಾದಗಿನಿಂದಲೂ ಕ್ರಿಕೆಟ್ ಲೋಕಕ್ಕೆ ಹಲವು ಯುವ ಪ್ರತಿಭೆಗಳು ಸಿಕ್ಕಿದ್ದಾರೆ. ಅದರಲ್ಲೂ ಭಾರತ ಕ್ರಿಕೆಟ್ಗೆ ವಿಶ್ವವೇ ಮೆಚ್ಚುವ ಆಟಗಾರರು ಸಿಕ್ಕಿದ್ದಾರೆ. ಅವರಲ್ಲಿ ಕಿಂಗ್ ಕೊಹ್ಲಿ, ರೋಹಿತ್ ಶರ್ಮಾರಿಂದ ಹಿಡಿದು ಈಗಿನ ಯುವ ಪ್ರತಿಭೆಗಳಾದ ಶುಭ್ಮನ್ ಗಿಲ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಇಂತಹ ಇನ್ನು ಹಲವು ಆಟಗಾರರು ಸೇರಿದ್ದಾರೆ. ಆದರೆ ದುರಾದೃಷ್ಟವಶಾತ್ ಈ ಆಟಗಾರರ ಪಟ್ಟಿಗೆ ಸೇರಬೇಕಾದ ಅವನೊಬ್ಬ ಕ್ರಿಕೆಟಿಗನ ಬದುಕು ಆರಂಭವಾಗುವ ಮೊದಲೇ ಅಂತ್ಯವಾಗುವ ಸಾಧ್ಯತೆಗಳು ಹೆಚ್ಚಾಗಿವೆ.
2020 ರಲ್ಲಿ ಐಪಿಎಲ್ಗೆ ಪದಾರ್ಪಣೆ ಮಾಡಿದ ಕನ್ನಡಿಗ ದೇವದತ್ ಪಡಿಕ್ಕಲ್ ತಾನು ಆಡಿದ ಮೊದಲ ಆವೃತ್ತಿಯಲ್ಲೇ ಅದ್ಭುತ ಆಟದ ಮೂಲಕ ಭಾರತ ಕ್ರಿಕೆಟ್ನ ಗಮನ ಸೆಳೆದಿದ್ದರು. ಆರ್‌ಸಿಬಿ ಪರ ಐಪಿಎಲ್ ಲೋಕಕ್ಕೆ ಕಾಲಿಟ್ಟಿದ್ದ ಪಡಿಕಲ್, ಈ ತಂಡದ ಪರ ಆಡುವವರೆಗೂ ಟೀಂ ಇಂಡಿಯಾದ ಭವಿಷ್ಯದ ಸೂಪರ್ ಸ್ಟಾರ್ ಎನಿಸಿಕೊಂಡಿದ್ದರು. ಆದರೆ ಫ್ರಾಂಚೈಸಿ ಬದಲಾಗುತ್ತಿದ್ದಂತೆ ಈ ಆಟಗಾರನ ಕ್ರಿಕೆಟ್ ಬದುಕು ಬೇರೆ ದಾರಿಯನ್ನೇ ಹಿಡಿದಿದೆ.
2020 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಡಿಕ್ಕಲ್ ಅವರನ್ನು ಮೂಲ ಬೆಲೆ 20 ಲಕ್ಷ ರೂಪಾಯಿಗೆ ಖರೀದಿಸಿತ್ತು. ಮೊದಲ ಸೀಸನ್ನಲ್ಲೇ ಅಬ್ಬರಿಸಿದ್ದ ದೇವದತ್, ಆಡಿದ 15 ಪಂದ್ಯಗಳಲ್ಲಿ 5 ಅರ್ಧ ಶತಕ ಸೇರಿದಂತೆ 473 ರನ್ ಬಾರಿಸಿದ್ದರು.
ಆ ಬಳಿಕ ಮುಂದಿನ ಸೀಸನ್ಲ್ಲೂ ಆರ್‌ಸಿಬಿ ಪರ 14 ಪಂದ್ಯಗಳನ್ನಾಡಿದ್ದ ಪಡಿಕ್ಕಲ್, ಶತಕ ಸೇರಿದಂತೆ 411 ರನ್ ಸಿಡಿಸಿದ್ದರು. ಹೀಗಾಗಿ ಈ ಸೀಸನ್ ಬಳಿಕ ತಂಡ ಬದಲಾಯಿಸಿದ ಪಡಿಕ್ಕಲ್‌ಗೆ ಐಪಿಎಲ್ ಹರಾಜಿನಲ್ಲಿ ಕೋಟಿ ಕೋಟಿ ನೀಡಿ ರಾಜಸ್ಥಾನ್ ಫ್ರಾಂಚೈಸ್ ಖರೀದಿಸಿತು.
2022 ರಲ್ಲಿ ಐಪಿಎಲ್ ಹರಾಜಿಗೆ ಎಂಟ್ರಿಕೊಟ್ಟಿದ್ದ ಪಡಿಕ್ಕಲ್ ಅವರನ್ನು ಖರೀದಿಸಲು ಆರ್‌ಸಿಬಿ, ಮುಂಬೈ ಮತ್ತು ರಾಜಸ್ಥಾನ ತಂಡಗಳು ಬಾರಿ ಪೈಪೋಟಿ ನೀಡಿದ್ದವು. ಆದರೆ ಅಂತಿಮವಾಗಿ ರೂ. 7.75 ಕೋಟಿ ನೀಡಿ ಖರೀದಿಸುವಲ್ಲಿ ರಾಜಸ್ಥಾನ್ ಯಶಸ್ವಿಯಾಗಿತ್ತು.
ದುಬಾರಿ ಹಣ ಪಡೆದು ರಾಜಸ್ಥಾನ್ ರಾಯಲ್ಸ್ ತಂಡ ಸೇರಿಕೊಂಡ ಪಡಿಕ್ಕಲ್‌ಗೆ ಹೊಸ ಪಾತ್ರವನ್ನು ನೀಡಲಾಯಿತು. ಇಲ್ಲಿಂದಲೇ ಪಡಿಕ್ಕಲ್ ಕ್ರಿಕೆಟ್ ಬದುಕು ಕುಸಿಯಲಾರಂಭಿಸಿತು. ಆರ್‌ಸಿಬಿ ಪರ ಓಪನಿಂಗ್ ಮಾಡುತ್ತಿದ್ದ ಪಡಿಕ್ಕಲ್‌ಗೆ ಈ ತಂಡದಲ್ಲಿ ಆರಂಭಿಕನ ಬದಲು 3 ಮತ್ತು 4 ನೇ ಕ್ರಮಾಂಕದ ಜವಾಬ್ದಾರಿಯನ್ನು ನೀಡಲಾಯಿತು.
2022ರಲ್ಲಿ ರಾಜಸ್ಥಾನ್ ಪರ 17 ಪಂದ್ಯಗಳನ್ನಾಡಿದ ಪಡಿಕ್ಕಲ್ 122ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿ 376 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಅವರ ಬ್ಯಾಟ್‌ನಿಂದ ಕೇವಲ 1 ಅರ್ಧಶತಕ ಮಾತ್ರ ಹೊರಹೊಮ್ಮಿತು. ಇದೀಗ ಈ ಸೀಸನ್ನಲ್ಲೂ ಪಡಿಕ್ಕಲ್‌ಗೆ ಮಧ್ಯಮ ಕ್ರಮಾಂಕದಲ್ಲಿ ಅವಕಾಶ ನೀಡಲಾಗುತ್ತಿದೆ.
ಹೈದರಾಬಾದ್ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ ಪಡಿಕ್ಕಲ್ 5 ಎಸೆತಗಳನ್ನು ಎದುರಿಸಿ ಕೇವಲ 2 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಇನ್ನು 2ನೇ ಪಂದ್ಯದಲ್ಲೂ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳದ ಪಡಿಕ್ಕಲ್, ಪಂಜಾಬ್ ಕಿಂಗ್ಸ್ ವಿರುದ್ಧ ಬರೋಬ್ಬರಿ 26 ಎಸೆತಗಳನ್ನು ಎದುರಿಸಿ 80.77ರ ಸ್ಟ್ರೈಕ್ ರೇಟ್ನಲ್ಲಿ ಕೇವಲ 21 ರನ್ ಬಾರಿಸಿದ್ದರು.
ಗುವಾಹಟಿಯಂತಹ ಬ್ಯಾಟಿಂಗ್ ಸ್ನೇಹಿ ಪಿಚ್ನಲ್ಲೂ ಪಡಿಕ್ಕಲ್ ಅವರ ಬ್ಯಾಟ್ ಮೌನವಾಗಿದಿದ್ದು, ಬ್ಯಾಟಿಂಗ್ ಕ್ರಮಾಂಕದ ಬದಲಾವಣೆಯ ಅಡ್ಡ ಪರಿಣಾಮ ಈ ಆಟಗಾರನ ಮೇಲೆ ಆಗುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ರಾಜಸ್ಥಾನ್ ರಾಯಲ್ಸ್ ತಂಡ ಪಡಿಕ್ಕಲ್ ಅವರನ್ನು ಮಧ್ಯಮ ಕ್ರಮಾಂಕದಲ್ಲೇ ಆಡಿಸಿದರೆ ಈ ಆಟಗಾರನ ಆಟ ಇನ್ನಷ್ಟು ಹದಗೆಡುವುದಂತೂ ಖಚಿತ.
Published On - 4:23 pm, Thu, 6 April 23