Updated on: Apr 16, 2023 | 12:01 AM
IPL 2023: ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಆರ್ಸಿಬಿ ನಡುವಣ ಪಂದ್ಯವು ಇದೀಗ ಹಲವು ಕಾರಣಗಳಿಂದ ಚರ್ಚಾ ವಿಷಯವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಡೇವಿಡ್ ವಾರ್ನರ್ ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ಪರ ವಿರಾಟ್ ಕೊಹ್ಲಿ ಅಬ್ಬರಿಸಿದ್ದರು. ಇದಾದ ಬಳಿಕ ಬೌಲಿಂಗ್ನಲ್ಲಿ ಚೊಚ್ಚಲ ಪಂದ್ಯದಲ್ಲಿ ಕನ್ನಡಿಗ ವೈಶಾಕ್ ವಿಜಯಕುಮಾರ್ ಮಿಂಚಿದ್ದರು. ಆದರೆ ಇವೆಲ್ಲದರ ನಡುವೆ ವಿರಾಟ್ ಕೊಹ್ಲಿ ಹಾಗೂ ಸೌರವ್ ಗಂಗೂಲಿ ನಡುವಣ ಕೆಲ ಸನ್ನಿವೇಶಗಳು ಹೊಸ ಚರ್ಚೆಗಳನ್ನು ಹುಟ್ಟುಹಾಕಿದೆ.
ಹೌದು, ಈ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಿರ್ದೇಶಕರಾಗಿರುವ ಸೌರವ್ ಗಂಗೂಲಿಯನ್ನು ಗುರಾಯಿಸುತ್ತಿರುವ ಫೋಟೋಗಳು ವೈರಲ್ ಆಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡವು 8 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿದ್ದ ವೇಳೆ ವಿರಾಟ್ ಕೊಹ್ಲಿ ಡಗೌಟ್ನಲ್ಲಿ ಕೂತಿದ್ದ ಸೌರವ್ ಗಂಗೂಲಿಯನ್ನು ಕೆಲ ಕ್ಷಣಗಳ ದಿಟ್ಟಿಸಿ ನೋಡಿದ್ದಾರೆ. ಇದನ್ನು ಗಮಿನಿಸಿದ ಮಿಚೆಲ್ ಮಾರ್ಷ್ ಹಾಗೂ ಇತರೆ ಸಿಬ್ಬಂದಿಗಳು ವಿರಾಟ್ ಕೊಹ್ಲಿಯನ್ನು ನೋಡುತ್ತಿರುವುದು ಕಾರಣಬಹುದು.
ಇದಕ್ಕೂ ಮುನ್ನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಫೀಲ್ಡಿಂಗ್ ಮಾಡುವಾಗ ಗಂಗೂಲಿಯನ್ನು ಗುರಾಯಿಸಿದ್ದರು. ಅಲ್ಲದೆ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಮತ್ತು ಗಂಗೂಲಿ ಹಸ್ತಲಾಘವ ಮಾಡಿರಲಿಲ್ಲ. ಇದರೊಂದಿಗೆ ಇಬ್ಬರ ನಡುವಣ ಶೀತಮ ಸಮರ ಕೂಡ ಬಹಿರಂಗವಾಗಿತ್ತು.
ಅಂದಹಾಗೆ ಈ ಶೀತಲ ಸಮರಕ್ಕೆ ಮುಖ್ಯ ಕಾರಣ 2021 ರಲ್ಲಿ ವಿರಾಟ್ ಕೊಹ್ಲಿಯನ್ನು ಭಾರತ ಏಕದಿನ ತಂಡದ ನಾಯಕತ್ವದಿಂದ ವಜಾಗೊಳಿಸಿದ್ದು. ಈ ವೇಳೆ ಬಿಸಿಸಿಐ ಅಧ್ಯಕ್ಷರಾಗಿದದ್ದು ಸೌರವ್ ಗಂಗೂಲಿ.
ಅಂದು ನಾಯಕತ್ವದಿಂದ ಕೆಳಗಿಳಿಸುವ ತಮ್ಮ ನಿರ್ಧಾರವನ್ನು ವಿರಾಟ್ ಕೊಹ್ಲಿಗೆ ತಿಳಿಸಲಾಗಿದೆ ಎಂದು ಸೌರವ್ ಗಂಗೂಲಿ ತಿಳಿಸಿದ್ದರು. ಆದರೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ ತಂಡದ ನಾಯಕತ್ವದಿಂದ ತೆಗೆದುಹಾಕುವ ಬಗ್ಗೆ ಮುಂಚಿತವಾಗಿ ತಿಳಿಸದೆ ಬಿಸಿಸಿಐ ಸುಳ್ಳು ಹೇಳಿದೆ ಎಂದು ಆರೋಪಿಸಿದ್ದರು.
Published On - 11:08 pm, Sat, 15 April 23