Updated on: Apr 08, 2023 | 11:30 PM
IPL 2023: ಐಪಿಎಲ್ನ 11ನೇ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ದಾಖಲೆ ಬರೆದಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಆಯ್ದುಕೊಂಡಿತ್ತು.
ಅದರಂತೆ ಆರ್ಆರ್ ಪರ ಯಶಸ್ವಿ ಜೈಸ್ವಾಲ್ ಹಾಗೂ ಜೋಸ್ ಬಟ್ಲರ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಈ ವೇಳೆ ಸ್ಟ್ರೈಕ್ ತೆಗೆದುಕೊಂಡ ಜೈಸ್ವಾಲ್ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಿಡಿಲಬ್ಬರದ ಆರಂಭ ಒದಗಿಸಿದರು.
ಖಲೀಲ್ ಅಹ್ಮದ್ ಎಸೆದ ಇನಿಂಗ್ಸ್ನ ಮೊದಲ ಓವರ್ನ ಮೊದಲ ಎಸೆತಕ್ಕೆ ಫೋರ್ ಬಾರಿಸುವ ಮೂಲಕ ಶುಭಾರಂಭ ಮಾಡಿದ ಜೈಸ್ವಾಲ್, 2ನೇ ಎಸೆತವನ್ನು ಕೂಡ ಬೌಂಡರಿಗಟ್ಟಿದರು. ಇನ್ನು ಮೂರನೇ ಎಸೆತದಲ್ಲೂ ಫೋರ್ ಬಾರಿಸಿ ಹ್ಯಾಟ್ರಿಕ್ ಬೌಂಡರಿ ಸಿಡಿಸಿದರು.
ಆದರೆ ನಾಲ್ಕನೇ ಎಸೆತದ ಮೂಲಕ ಯಶಸ್ವಿ ಜೈಸ್ವಾಲ್ ಅವರನ್ನು ವಂಚಿಸುವಲ್ಲಿ ಖಲೀಲ್ ಅಹ್ಮದ್ ಯಶಸ್ವಿಯಾದರು. ಆದರೆ 5ನೇ ಹಾಗೂ 6ನೇ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ 2 ಫೋರ್ ಬಾರಿಸಿ ಜೈಸ್ವಾಲ್ ಒಟ್ಟು 20 ರನ್ ಕಲೆಹಾಕಿದರು.
ವಿಶೇಷ ಎಂದರೆ ಇದು ಈ ಬಾರಿಯ ಐಪಿಎಲ್ನಲ್ಲಿ ಅತ್ಯಂತ ದುಬಾರಿ ಓವರ್ ಆಗಿದೆ. ಅಂದರೆ ಐಪಿಎಲ್ 2023ರಲ್ಲಿ ಇದುವರೆಗೆ ನಡೆದ 12 ಪಂದ್ಯಗಳಲ್ಲಿ ಯಾವುದೇ ಬ್ಯಾಟರ್ ಮೊದಲ ಓವರ್ನಲ್ಲೇ 20 ರನ್ ಕಲೆಹಾಕಿಲ್ಲ. ಇದಾಗ್ಯೂ ಇದು ಐಪಿಎಲ್ನ ಐತಿಹಾಸಿಕ ದಾಖಲೆಯಂತು ಅಲ್ಲ.
ಐಪಿಎಲ್ ಇನಿಂಗ್ಸ್ನ ಮೊದಲ ಓವರ್ನಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ದಾಖಲೆ ಕ್ರಿಸ್ ಗೇಲ್-ಮಯಾಂಕ್ ಅಗರ್ವಾಲ್ ಹೆಸರಿನಲ್ಲಿದೆ. 2011 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಪರ ಕಣಕ್ಕಿಳಿದಿದ್ದ ಗೇಲ್-ಅರ್ಗವಾಲ್ ಜೊತೆಗೂಡಿ ಅಬು ನಚೀಮ್ ಎಸೆದ ಮೊದಲ ಓವರ್ನಲ್ಲಿ ಒಟ್ಟು 27 ರನ್ ಕಲೆಹಾಕಿದ್ದರು.
ಇನ್ನು ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 199 ರನ್ ಕಲೆಹಾಕಿದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡವು 142 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಸಂಜು ಸ್ಯಾಮ್ಸನ್ ಪಡೆ 57 ರನ್ಗಳ ಭರ್ಜರಿ ಜಯ ಸಾಧಿಸಿತು. ಹಾಗೆಯೇ ಈ ಪಂದ್ಯದಲ್ಲಿ 31 ಎಸೆತಗಳಲ್ಲಿ 1 ಭರ್ಜರಿ ಸಿಕ್ಸ್ ಹಾಗೂ 11 ಫೋರ್ನೊಂದಿಗೆ 60 ರನ್ ಬಾರಿಸಿದ ಯಶಸ್ವಿ ಜೈಸ್ವಾಲ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.