
17ನೇ ಆವೃತ್ತಿಯ ಐಪಿಎಲ್ಗೂ ಮುನ್ನ ಲೀಗ್ನ ಅತ್ಯಂತ ಜನಪ್ರಿಯ ಫ್ರಾಂಚೈಸಿಯಾದ ಆರ್ಸಿಬಿ ಅನ್‌ಬಾಕ್ಸ್ ಈವೆಂಟ್ ಮೂಲಕ ಅಭಿಮಾನಿಗಳಿಗೆ ರಸದೌತಣ ಬಡಿಸಿದೆ. ನಿನ್ನೆ ನಡೆದ ಈ ಕಾರ್ಯಕ್ರಮದಲ್ಲಿ ತಂಡದ ಹೆಸರು ಬದಲಾವಣೆಯಿಂದ ಹಿಡಿದು ಹೊಸ ಜೆರ್ಸಿ ಅನಾವರಣದವರೆಗೆ ನಡೆದ ಪ್ರಮುಖ ಘಟನಾವಳಿಗಳ ಹೈಲೆಟ್ಸ್ ಇಲ್ಲಿದೆ.

ಮೊದಲನೆಯದ್ದಾಗಿ ಐಪಿಎಲ್ ಆರಂಭವಾಗಿ ಇಲ್ಲಿಗೆ 17 ವರ್ಷಗಳು ಕಳೆದಿವೆ. ಆದರೆ ಮೊದಲನೇ ಆವೃತ್ತಿಯಿಂದಲೂ ಕನ್ನಡಿಗರ ಕೂಗೆಂದರೆ ಅದು ಆರ್ಸಿಬಿ ತಂಡದ ಹೆಸರು ಬದಲಾಗಬೇಕು ಎಂಬುದು. ಅದರಂತೆ 16 ಆವೃತ್ತಿಗಳ ನಂತರ ತಂಡದ ಹೆಸರು ಬದಲಿಸಿರುವ ಫ್ರಾಂಚೈಸಿ, ರಾಯಲ್ ಚಾಲೆಂಜರ್ಸ್ ಬ್ಯಾಂಗಲೂರ್ ಬದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಬದಲಾಯಿಸಿದೆ.

ಈ ಕಾರ್ಯಕ್ರಮದ ಪ್ರಮುಖ ಹೈಲೆಟ್ಸ್ ಅಂದರೆ ಅದು ತಂಡದ ಜೀವಾಳ ವಿರಾಟ್ ಕೊಹ್ಲಿ ಕನ್ನಡದಲ್ಲಿ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದ್ದು, ಕನ್ನಡವನ್ನು ಸ್ಪಷ್ಟವಾಗಿ ಮಾತನಾಡಿದ ಕೊಹ್ಲಿ, ಇದು ಆರ್‌ಸಿಬಿಯ ಹೊಸ ಅಧ್ಯಾಯ ಎಂದು ಹೇಳುವ ಮೂಲಕ ಕನ್ನಡಿಗರು ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಕೊಹ್ಲಿಯ ಕನ್ನಡ ಕೇಳಿದ ಪ್ರೇಕ್ಷಕರು ಸಂತಸದ ಅಲೆಯಲ್ಲಿ ಮಿಂದೆದ್ದರು.

ಆರ್ಸಿಬಿ ಪರ ಹಲವು ವರ್ಷಗಳ ಕಾಲ ಐಪಿಎಲ್ ಆಡಿದ್ದ ದಾವಣಗೆರೆ ಎಕ್ಸ್‌ಪ್ರೆಸ್ ಖ್ಯಾತಿಯ ಕನ್ನಡಿಗ ವಿನಯ್ ಕುಮಾರ್ ಅವರನ್ನು ಆರ್ಸಿಬಿ ಹಾಲ್ ಆಫ್ ಫೇಮ್‌ಗೆ ಸೇರಿಸಲಾಯಿತು. ವಿನಯ್ ಕುಮಾರ್ಗೂ ಮೊದಲು ಈ ಗೌರವಕ್ಕೆ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಹಾಗೂ ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್ ಪಾತ್ರರಾಗಿದ್ದರು.

ಈ ಈವೆಂಟ್‌ನಲ್ಲಿ ವಿರಾಟ್ ಕೊಹ್ಲಿ, ಸ್ಮೃತಿ ಮಂಧಾನ ಮತ್ತು ಫಾಫ್ ಡು ಪ್ಲೆಸಿಸ್ ಈ ಐಪಿಎಲ್ಗಾಗಿ ಆರ್‌ಸಿಬಿಯ ಅಧಿಕೃತ ಜೆರ್ಸಿಯನ್ನು ಅನಾವರಣಗೊಳಿಸಿದರು.

ಈ ಈವೆಂಟ್‌ನಲ್ಲಿ ನಾರ್ವೇಜಿಯನ್ ಡಿಜೆ ಮತ್ತು ಸಂಗೀತ ಸಂಯೋಜಕ ಅಲನ್ ವಾಕರ್ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಮೈದಾನದಲ್ಲಿ ನೆರೆದಿದ್ದವರು ಹುಚ್ಚೆದು ಕುಣಿಯುವಂತೆ ಮಾಡಿದರು.

ಡಬ್ಲ್ಯುಪಿಎಲ್ನ ಎರಡನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿ ಇದೇ ಮೊದಲ ಬಾರಿಗೆ ಟ್ರೋಫಿಯನ್ನು ಎತ್ತಿಹಿಡಿದ ಆರ್ಸಿಬಿ ಮಹಿಳಾ ತಂಡಕ್ಕೆ ಗಾರ್ಡ್ ಆಫ್ ಹಾನರ್ ನೀಡಲಾಯಿತು. ಈ ವೇಳೆ ಆರ್‌ಸಿಬಿಯ ಪುರುಷ ಆಟಗಾರರು ಹಾಗೂ ಸಿಬ್ಬಂದಿಗಳು ಎದುರು ಬದುರು ನಿಂತು ಚಪ್ಪಾಳೆ ತಟ್ಟುವ ಮೂಲಕ ಮಹಿಳಾ ಪಡೆಯನ್ನು ಸ್ವಾಗತಿಸಿದರು.

ಬರೋಬ್ಬರಿ 16 ವರ್ಷಗಳ ಟ್ರೋಫಿ ಬರ ನೀಗಿಸಿದ ಆರ್ಸಿಬಿ ಮಜಿಳಾ ತಂಡ ಚೊಚ್ಚಲ ಟ್ರೋಫಿಯನ್ನು ಕೈಯಲ್ಲಿ ಹಿಡಿದು ಮೈದಾನದ ಸುತ್ತ ಹೆಜ್ಜೆ ಹಾಕಿತು. ಈ ವೇಳೆ ಪ್ರೇಕ್ಷಕರು ಚಪ್ಪಾಳೆ ತಟ್ಟುತ್ತಾ ಜೋರಾಗಿ ಹರ್ಷೋದ್ಗಾರ ಮಾಡಿ ಮಹಿಳಾ ಪಡೆಯನ್ನು ಅಭಿನಂದಿಸಿದರು.