IPL 2024: ಐಪಿಎಲ್ ಸೀಸನ್ 17 ಹರಾಜಿಗಾಗಿ ಎಲ್ಲಾ ತಂಡಗಳು ಸಿದ್ಧತೆಯಲ್ಲಿದೆ. ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿರುವ ಮಿನಿ ಹರಾಜಿಗಾಗಿ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಇತ್ತ ಈ ಹರಾಜಿಗಾಗಿ ಆರ್ಸಿಬಿ (RCB) ಕೂಡ ಭರ್ಜರಿ ಪ್ಲ್ಯಾನ್ನಲ್ಲಿದೆ.
ಏಕೆಂದರೆ ಈ ಬಾರಿಯ ಹರಾಜಿನ ಮೂಲಕ ಆರ್ಸಿಬಿ ತಂಡವು ಒಟ್ಟು 6 ಆಟಗಾರರನ್ನು ಖರೀದಿಸಬಹುದು. ಆದರೆ ಈ ಆರು ಆಟಗಾರರಲ್ಲಿ ಮೂವರು ವಿದೇಶಿ ಆಟಗಾರರಿಗೆ ಮಣೆ ಹಾಕಬೇಕಾಗುತ್ತದೆ. ಆದರೆ ಇತ್ತ ಆರ್ಸಿಬಿ ಬಳಿ ಇರುವುದು 23.25 ಕೋಟಿ ರೂ. ಮಾತ್ರ. ಹೀಗಾಗಿ ಜಾಣತನದೊಂದಿಗೆ ಆಟಗಾರರನ್ನು ಆಯ್ಕೆ ಮಾಡಬೇಕಾಗುತ್ತದೆ.
ಒಂದು ವೇಳೆ ಹರಾಜಿನ ಸಮಯದಲ್ಲಿ ಮೈಮರೆತರೆ ಈ ಹಿಂದಿನಂತೆ ಈ ಬಾರಿ ಕೂಡ ಆರ್ಸಿಬಿ ತಂಡಕ್ಕೆ ಕಳಪೆ ಆಟಗಾರರು ಸೇರ್ಪಡೆಯಾಗಬಹುದು. ಏಕೆಂದರೆ ಆರ್ಸಿಬಿ ಕಳೆದ 16 ಸೀಸನ್ಗಳಲ್ಲಿ ಕೆಲ ಆಟಗಾರರಿಗೆ ದುಬಾರಿ ಮೊತ್ತ ನೀಡಿ ಸಂಕಷ್ಟಕ್ಕೆ ಸಿಲುಕಿದೆ. ಹೀಗೆ ಕಳೆದ ಹದಿನಾರು ಆವೃತ್ತಿಗಳ ಹರಾಜಿನಲ್ಲಿ ಆರ್ಸಿಬಿ ಮಾಡಿದ ಅತ್ಯಂತ ಕೆಟ್ಟ ಆಯ್ಕೆಗಳು ಯಾವುವು ಎಂದು ನೋಡುವುದಾದರೆ...
ಟೈಮಲ್ ಮಿಲ್ಸ್: 2017 ರ ಹರಾಜಿನಲ್ಲಿ ಆರ್ಸಿಬಿ ತಂಡವು ಇಂಗ್ಲೆಂಡ್ ವೇಗಿ ಟೈಮಲ್ ಮಿಲ್ಸ್ರನ್ನು ಬರೋಬ್ಬರಿ 12 ಕೋಟಿ ರೂ.ಗೆ ಖರೀದಿಸಿತ್ತು. ಅಂದು 5 ಪಂದ್ಯಗಳನ್ನಾಡಿದ್ದ ಮಿಲ್ಸ್ 8.5 ಸರಾಸರಿಯಲ್ಲಿ ರನ್ ನೀಡಿ ಕೇವಲ 5 ವಿಕೆಟ್ ಮಾತ್ರ ಪಡೆದಿದ್ದರು.
ಕೈಲ್ ಜೇಮಿಸನ್: 2021 ರ ಹರಾಜಿನಲ್ಲಿ ನ್ಯೂಝಿಲೆಂಡ್ ವೇಗಿ ಕೈಲ್ ಜೇಮಿಸನ್ ಅವರನ್ನು ಆರ್ಸಿಬಿ ಖರೀದಿಸಿದ್ದು ಬರೋಬ್ಬರಿ 15 ಕೋಟಿ ರೂ.ಗೆ. ಆರ್ಸಿಬಿ ಪರ 9 ಪಂದ್ಯಗಳನ್ನಾಡಿದ್ದ ಜೇಮಿಸನ್ ಕೇವಲ 9 ವಿಕೆಟ್ ಪಡೆಯಲಷ್ಟೇ ಶಕ್ತರಾಗಿದ್ದರು.
ಸೌರಭ್ ತಿವಾರಿ: 2011 ರಲ್ಲಿ ಆರ್ಸಿಬಿ 7.36 ಕೋಟಿ ರೂ.ಗೆ ಎಡಗೈ ದಾಂಡಿಗ ಸೌರಭ್ ತಿವಾರಿಯನ್ನು ಖರೀದಿಸಿತ್ತು. ಆದರೆ ಆರ್ಸಿಬಿ ಪರ ಮೂರು ಸೀಸನ್ ಆಡಿದ ತಿವಾರಿ 22.23 ರ ಸರಾಸರಿಯಲ್ಲಿ ಕೇವಲ 578 ರನ್ ಕಲೆಹಾಕಿದ್ದರು.
ಚೇತೇಶ್ವರ ಪೂಜಾರ: 2011 ರ ಹರಾಜಿನಲ್ಲಿ ಆರ್ಸಿಬಿ ಚೇತೇಶ್ವರ ಪೂಜಾರ ಅವರನ್ನು ಬರೋಬ್ಬರಿ 3.22 ಕೋಟಿ ರೂ. ಖರೀದಿಸಿತ್ತು. ಮೂರು ಸೀಸನ್ಗಳಲ್ಲಿ ಆರ್ಸಿಬಿ ಪರ 14 ಪಂದ್ಯಗಳನ್ನಾಡಿದ್ದ ಪೂಜಾರ ಕಲೆಹಾಕಿದ್ದು 14.3 ರ ಸರಾರಿಯಲ್ಲಿ ಕೇವಲ 143 ರನ್ಗಳು ಮಾತ್ರ.
ಕ್ರಿಸ್ ವೋಕ್ಸ್: 2018 ರಲ್ಲಿ ಆರ್ಸಿಬಿ ಕ್ರಿಸ್ ವೋಕ್ಸ್ ಅವರನ್ನು 7.4 ಕೋಟಿ ರೂ.ಗೆ ಖರೀದಿಸಿತ್ತು. ಅದರಂತೆ ಆರ್ಸಿಬಿ ಪರ 5 ಪಂದ್ಯಗಳನ್ನಾಡಿದ್ದ ಇಂಗ್ಲೆಂಡ್ ವೇಗಿ ಪ್ರತಿ ಓವರ್ಗೆ 10.36 ಸರಾಸರಿಯಲ್ಲಿ ರನ್ ನೀಡಿ 8 ವಿಕೆಟ್ಗಳನ್ನಲಷ್ಟೇ ಕಬಳಿಸಿದ್ದರು.