
ಈ ಸೀಸನ್ನಲ್ಲಿ ಗೆಲುವಿಗಿಂತ ಹೆಚ್ಚು ಸೋಲುಗಳನ್ನೇ ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಲೀಗ್ನಿಂದ ಹೊರಬೀಳುವ ಆತಂಕದಲ್ಲಿದೆ. ಈ ನಡುವೆ ತಂಡಕ್ಕೆ ಆಘಾತ ಎದುರಾಗಿದ್ದು, ಗಾಯದ ಕಾರಣದಿಂದಾಗಿ ತಂಡದ ಸ್ಟಾರ್ ಆಲ್‌ರೌಂಡರ್ ಮಿಚೆಲ್ ಮಾರ್ಷ್ ಲೀಗ್ನಿಂದಲೇ ಹೊರಬಿದ್ದಿದ್ದಾರೆ.

ಮಿಚೆಲ್ ಮಾರ್ಷ್ ಆರಂಭಿಕ ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದರು. ಆದರೆ ಆ ಬಳಿಕ ಮಾರ್ಷ್ ಗಾಯದ ಕಾರಣದಿಂದಾಗಿ ತಂಡದಿಂದ ಹೊರಗುಳಿದಿದ್ದರು. ಇದೀಗ ಮಾರ್ಷ್ ಇಡೀ ಲೀಗ್ನಿಂದಲೇ ಹೊರಗುಳಿಯಲ್ಲಿದ್ದಾರೆ.

ಅಷ್ಟಕ್ಕೂ ಮಿಚೆಲ್ ಮಾರ್ಷ್ ಐಪಿಎಲ್ನಿಂದ ಹೊರಬಿದ್ದಿರುವುದು ಡೆಲ್ಲಿ ತಂಡಕ್ಕೆ ಹೆಚ್ಚು ಹೊರೆ ಎನಿಸುವ ಸಾಧ್ಯತೆಗಳಿಲ್ಲ. ಏಕೆಂದರೆ ಆರಂಭಿಕ ಪಂದ್ಯಗಳಲ್ಲಿ ಡೆಲ್ಲಿ ಪರ ಆಡಿದ್ದ ಮಾರ್ಷ್ಗೆ ಗಮನಾರ್ಹ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ.

ಇನ್ನು ಮಾರ್ಷ್ ಅಲಭ್ಯತೆಯ ಬಗ್ಗೆ ಮಾಹಿತಿ ನೀಡಿರುವ ಡೆಲ್ಲಿ ಕೋಚ್ ರಿಕಿ ಪಾಂಟಿಂಗ್, ಮಾರ್ಷ್ ಅವರ ಚೇತರಿಕೆಯ ಪ್ರಕ್ರಿಯೆಯನ್ನು ಕ್ರಿಕೆಟ್ ಆಸ್ಟ್ರೇಲಿಯಾ ಪ್ರಾರಂಭಿಸಿದೆ. ಮಾರ್ಷ್ ಗಾಯದಿಂದ ಚೇತರಿಸಿಕೊಳ್ಳಲು ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ಕಾಣುತ್ತದೆ ಎಂದಿದ್ದಾರೆ.

ಮೇಲೆ ಹೇಳಿದಂತೆ ಈ ಆವೃತ್ತಿಯಲ್ಲಿ ಮಾರ್ಷ್ ಅವರ ಪ್ರದರ್ಶನವು ವಿಶೇಷವೇನಾಗಿರಲಿಲ್ಲ. ಆಡಿದ ನಾಲ್ಕು ಪಂದ್ಯಗಳಲ್ಲಿ ಅವರು ಕ್ರಮವಾಗಿ 20, 23, 18 ಮತ್ತು 0 ಸ್ಕೋರ್ ಕಲೆಹಾಕಿದ್ದರು. ಇದು ಅವರ ಕಳಪೆ ಫಾರ್ಮ್ಗೆ ಹಿಡಿದ ಕೈಗನ್ನಡಿಯಾಗಿತ್ತು.

ಮಾರ್ಷ್ ಅವರ ಐಪಿಎಲ್ ವೃತ್ತಿಜೀವನದ ಬಗ್ಗೆ ಹೇಳುವುದಾದರೆ.. 2010 ರಿಂದ ಐಪಿಎಲ್ ಆಡುತ್ತಿರುವ ಮಾರ್ಷ್ ಇದುವರೆಗೆ 42 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ 19.59 ಸರಾಸರಿಯಲ್ಲಿ 666 ರನ್ ಗಳಿಸಿದ್ದಾರೆ. ಇದರಲ್ಲಿ 3 ಅರ್ಧಶತಕಗಳು ಸೇರಿವೆ.

ಅದೇ ಸಮಯದಲ್ಲಿ, ಬೌಲಿಂಗ್ನಲ್ಲಿಯೂ ಗಮನಾರ್ಹ ಪ್ರದರ್ಶನ ನೀಡಿರುವ ಮಾರ್ಷ್ ಆಡಿರುವ 42 ಪಂದ್ಯಗಳಲ್ಲಿ ಒಟ್ಟು 37 ವಿಕೆಟ್‌ಗಳನ್ನು ಪಡೆದಿದ್ದಾರೆ. ಕಳೆದ ಆವೃತ್ತಿ ಒಂದರಲ್ಲೇ ಮಾರ್ಷ್ 12 ವಿಕೆಟ್ಗಳನ್ನು ಉರುಳಿಸಿದ್ದರು.