IPL 2024: LSG ತಂಡದಿಂದ ಗೌತಮ್ ಗಂಭೀರ್ಗೆ ಗೇಟ್ ಪಾಸ್..?
TV9 Web | Updated By: ಝಾಹಿರ್ ಯೂಸುಫ್
Updated on:
Aug 19, 2023 | 10:08 PM
IPL 2024: ಕಳೆದ ಸೀಸನ್ ಐಪಿಎಲ್ ವೇಳೆ ಗೌತಮ್ ಗಂಭೀರ್ ಆರ್ಸಿಬಿ ಅಭಿಮಾನಿಗಳ ವಿರುದ್ಧ ಅನುಚಿತವಾಗಿ ವರ್ತಿಸಿದ್ದರು. ಇದಲ್ಲದೆ ವಿರಾಟ್ ಕೊಹ್ಲಿ ಜೊತೆಗೂ ಮೈದಾನದಲ್ಲೇ ಜಗಳಕ್ಕಿಳಿದಿದ್ದರು.
1 / 7
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17 ಆರಂಭಕ್ಕೂ ಮುನ್ನವೇ ಎಲ್ಲಾ ತಂಡಗಳಿಗೂ ಮೇಜರ್ ಸರ್ಜರಿ ನಡೆಯುತ್ತಿದೆ. ಇದರ ಮೊದಲ ಭಾಗವಾಗಿ ಈಗಾಗಲೇ ಆರ್ಸಿಬಿ ಸೇರಿದಂತೆ ಕೆಲ ತಂಡಗಳ ಕೋಚ್ಗಳು ಬದಲಾಗಿದ್ದಾರೆ.
2 / 7
ಇದೀಗ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲೂ ಮಹತ್ವದ ಬದಲಾವಣೆ ಕಂಡು ಬರುವುದು ಖಚಿತವಾಗಿದೆ. ಈ ಹಿಂದೆ LSG ತಂಡದ ಕೋಚ್ ಸ್ಥಾನದಿಂದ ಆ್ಯಂಡಿ ಫ್ಲವರ್ ಅವರನ್ನು ಕೆಳಗಿಳಿಸಲಾಗಿತ್ತು. ಇದೀಗ ತಂಡದ ಮೆಂಟರ್ ಗೌತಮ್ ಗಂಭೀರ್ ಕೂಡ ಹೊರಬರುವುದು ಸಹ ಬಹುತೇಕ ಖಚಿತವಾಗಿದೆ.
3 / 7
ಪ್ರಸ್ತುತ ಮಾಹಿತಿ ಪ್ರಕಾರ, ಗೌತಮ್ ಗಂಭೀರ್ ಐಪಿಎಲ್ 2024 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದೊಂದಿಗೆ ಕಾಣಿಸಿಕೊಳ್ಳುವುದಿಲ್ಲ ಎಂದು ತಿಳಿದು ಬಂದಿದೆ. ಇದಕ್ಕೆ ನಿಖರ ಕಾರಣಗಳೇನು ಎಂಬುದು ಇನ್ನೂ ಕೂಡ ಬಹಿರಂಗವಾಗಿಲ್ಲ.
4 / 7
ಇದಾಗ್ಯೂ ಮುಂಬರುವ ಲೋಕಸಭಾ ಚುನಾವಣೆ ನಿಮಿತ್ತ ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ಹೊರಗುಳಿಯಲು ಗೌತಮ್ ಗಂಭೀರ್ ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ. ಪೂರ್ವ ದೆಹಲಿ ಸಂಸದರಾಗಿರುವ ಗಂಭೀರ್ ಮುಂದಿನ ಚುನಾವಣೆಯಲ್ಲೂ ಸ್ಪರ್ಧಿಸಲಿದ್ದು, ಹೀಗಾಗಿ ಐಪಿಎಲ್ನಿಂದ ಬ್ರೇಕ್ ಪಡೆಯಲು ಮುಂದಾಗಿದ್ದಾರಂತೆ.
5 / 7
ಮತ್ತೊಂದೆಡೆ ಮುಖ್ಯ ಕೋಚ್ ಆ್ಯಂಡಿ ಫ್ಲವರ್ ಹಾಗೂ ಗೌತಮ್ ಗಂಭೀರ್ ಜೊತೆಯಾಗಿ ಕಳೆದ 2 ವರ್ಷಗಳ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಕಾರ್ಯ ನಿರ್ವಹಿಸಿದ್ದರು. ಇದೀಗ ಆ್ಯಂಡಿ ಫ್ಲವರ್ ಅವರನ್ನು ಕೋಚ್ ಸ್ಥಾನದಿಂದ ತೆಗೆದು ಹಾಕಲಾಗಿದೆ. ಇದರ ಬೆನ್ನಲ್ಲೇ ಗಂಭೀರ್ ಕೂಡ ಹೊರಬೀಳಲಿದ್ದಾರೆ ಎನ್ನಲಾಗಿತ್ತು.
6 / 7
ಏಕೆಂದರೆ ಕಳೆದ ಸೀಸನ್ ಐಪಿಎಲ್ ವೇಳೆ ಗೌತಮ್ ಗಂಭೀರ್ ಆರ್ಸಿಬಿ ಅಭಿಮಾನಿಗಳ ವಿರುದ್ಧ ಅನುಚಿತವಾಗಿ ವರ್ತಿಸಿದ್ದರು. ಇದಲ್ಲದೆ ವಿರಾಟ್ ಕೊಹ್ಲಿ ಜೊತೆಗೂ ಮೈದಾನದಲ್ಲೇ ಜಗಳಕ್ಕಿಳಿದಿದ್ದರು. ಇವೆಲ್ಲವೂ ಲಕ್ನೋ ಸೂಪರ್ ಜೈಂಟ್ಸ್ ಬ್ರ್ಯಾಂಡ್ ಮೇಲೆ ಪರಿಣಾಮ ಬೀರಿರುವುದರಲ್ಲಿ ಅನುಮಾನವೇ ಇಲ್ಲ. ಹೀಗಾಗಿ ಲಕ್ನೋ ಫ್ರಾಂಚೈಸಿಯೇ ಗಂಭೀರ್ ಅವರನ್ನು ಕೈ ಬಿಡಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಅದಕ್ಕೂ ಮುನ್ನವೇ ಗೌತಮ್ ಗಂಭೀರ್ ಲಕ್ನೋ ತಂಡದಿಂದ ಹಿಂದೆ ಸರಿಯಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
7 / 7
ಒಟ್ಟಿನಲ್ಲಿ ಮುಂದಿನ ಸೀಸನ್ನಲ್ಲಿ ಲಕ್ನೋ ಬಳಗದಲ್ಲಿ ಗಂಭೀರ್ ಕಾಣಿಸಿಕೊಳ್ಳುವುದು ಅನುಮಾನ. ಈಗಾಗಲೇ ಲಕ್ನೋ ಸೂಪರ್ ಜೈಂಟ್ಸ್ ತಂಡದ ಹೊಸ ಕೋಚ್ ಆಗಿ ಆಸ್ಟ್ರೇಲಿಯಾದ ಮಾಜಿ ಆಟಗಾರ ಜಸ್ಟಿನ್ ಲ್ಯಾಂಗರ್ ಆಯ್ಕೆಯಾಗಿದ್ದಾರೆ. ಹೀಗಾಗಿ ಅವರ ಬಳಗವೇ ಎಲ್ಎಸ್ಜಿ ತಂಡದ ಸಿಬ್ಬಂದಿ ವರ್ಗದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಅದರಂತೆ ಎಲ್ಎಸ್ಜಿ ತಂಡದ ಮುಂದಿನ ಮೆಂಟರ್ ಆಗಿ ಯಾರು ಬರಲಿದ್ದಾರೆ ಎಂಬುದಷ್ಟೇ ಈಗ ಕುತೂಹಲ.