
ಸತತ ಸೋಲುಗಳಿಂದ ಕಂಗೆಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿನ್ನೆಯ ಪಂದ್ಯದಲ್ಲಿ ಲಕ್ನೋ ಸೂಪರ್‌ಜೈಂಟ್ಸ್ ತಂಡವನ್ನು ಮಣಿಸಿ ಮತ್ತೆ ಗೆಲುವಿನ ಲಯಕ್ಕೆ ಮರಳಿತ್ತು. ಅಲ್ಲದೆ ಪಾಯಿಂಟ್ಸ್ ಪಟ್ಟಿಯಲ್ಲೂ ಮೇಲೇರಿತ್ತು. ಆದರೆ ಗೆಲುವಿನ ಸಂಭ್ರಮವನ್ನು ಪೂರ್ಣವಾಗಿ ಆಚರಿಸುವ ಮುನ್ನವೇ ಡೆಲ್ಲಿ ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ.

ತಂಡದ ಸ್ಟಾರ್ ಆಲ್ರೌಂಡರ್ ಆಸ್ಟ್ರೇಲಿಯಾದ ಮಿಚೆಲ್ ಮಾರ್ಷ್ ಐಪಿಎಲ್ 2024 ರ ಮಧ್ಯದಲ್ಲೇ ತಮ್ಮ ತಾಯ್ನಾಡಿಗೆ ಅಂದರೆ ಆಸ್ಟ್ರೇಲಿಯಾಕ್ಕೆ ಮರಳಿದ್ದಾರೆ. ವಾಸ್ತವವಾಗಿ ಇಂಜುರಿಯಿಂದಾಗಿ ಬಳಲುತ್ತಿದ್ದ ಮಾರ್ಷ್ ಚಿಕಿತ್ಸೆಗಾಗಿ ತವರಿಗೆ ಮರಳಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನು ಕೆಲವೇ ದಿನಗಳಲ್ಲಿ ಟಿ20 ವಿಶ್ವಕಪ್ ಆರಂಭವಾಗಲಿದೆ. ಹೀಗಾಗಿ ಟಿ20 ಮಾದರಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸುವ ಜವಬ್ದಾರಿ ಮಿಚೆಲ್ ಮಾರ್ಷ್ ಹೆಗಲಿಗೆ ಬೀಳುವ ಸಾಧ್ಯತೆಗಳಿವೆ. ಆದ್ದರಿಂದ ವಿಶ್ವಕಪ್ ವೇಳೆಗೆ ಚೇತರಿಸಿಕೊಳ್ಳಲು ಮಾರ್ಷ್ ಆಸ್ಟ್ರೇಲಿಯಾಕ್ಕೆ ವಾಪಸ್ಸಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಇಂಜುರಿಯಿಂದ ಬಳಲುತ್ತಿದ್ದ ಮಾರ್ಷ್ ಡೆಲ್ಲಿ ಪರ ಕೊನೆಯ ಎರಡು ಪಂದ್ಯಗಳನ್ನು ಆಡಿರಲಿಲ್ಲ. ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್‌ಜೈಂಟ್ಸ್ ವಿರುದ್ಧದ ಪಂದ್ಯಕ್ಕೆ ಮಾರ್ಷ್ ಲಭ್ಯವಿರಲಿಲ್ಲ. ಮಾರ್ಷ್ ಕೊನೆಯದಾಗಿ ಏಪ್ರಿಲ್ 3 ರಂದು ಡೆಲ್ಲಿ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ಆಡಿದ್ದರು.

ಮಾಧ್ಯಮ ವರದಿಗಳ ಪ್ರಕಾರ, ಮುಂಬೈ ವಿರುದ್ಧದ ಪಂದ್ಯದ ನಂತರವೇ ಮಾರ್ಷ್ ಆಸ್ಟ್ರೇಲಿಯಾಕ್ಕೆ ಮರಳಿದ್ದಾರೆ. ಸದ್ಯ ತವರಿಗೆ ಮರಳಿರುವ ಮಾರ್ಷ್ ಐಪಿಎಲ್‌ನ ಪ್ರಸಕ್ತ ಸೀಸನ್ನಿಂದ ಹಿಂದೆ ಸರಿಯುತ್ತಾರೆಯೇ ಅಥವಾ ಮರಳುತ್ತಾರೆಯೇ ಎಂಬುದರ ಕುರಿತು ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಯಾವುದೇ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ತಿಳಿದುಬಂದಿದೆ.

ಡೆಲ್ಲಿಗೆ ಮತ್ತೊಂದು ಚಿಂತೆಯ ವಿಷಯವೆಂದರೆ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಗಾಯಗೊಂಡಿರುವುದು. ಶುಕ್ರವಾರ ಲಕ್ನೋ ವಿರುದ್ಧದ ಪಂದ್ಯದ ವೇಳೆ ವಾರ್ನರ್ ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಮಾಧ್ಯಮ ವರದಿಗಳ ಪ್ರಕಾರ, ವಾರ್ನರ್ ಅವರ ಬೆರಳು ಊದಿಕೊಂಡಿದ್ದು, ಸ್ಕ್ಯಾನಿಂಗಾಗಿ ವಾರ್ನರ್ ಅಹಮದಾಬಾದ್ಗೆ ತೆರಳಿದ್ದಾರೆ.

ಪ್ರಸ್ತುತ ಗೆಲುವಿನ ಲಯಕ್ಕೆ ಮರಳಿರುವ ಡೆಲ್ಲಿ ಕ್ಯಾಪಿಟಲ್ಸ್ ಏಪ್ರಿಲ್ 17 ರಂದು ಗುಜರಾತ್ ಟೈಟಾನ್ಸ್ ವಿರುದ್ಧ ಪಂದ್ಯವನ್ನು ಆಡಬೇಕಾಗಿದೆ. ಈ ಪಂದ್ಯಕ್ಕೂ ಮುನ್ನ ಡೇವಿಡ್ ವಾರ್ನರ್ ತಂಡವನ್ನು ಸೇರಿಕೊಳ್ಳುತ್ತಾರಾ ಎಂದು ಕಾದುನೋಡಬೇಕಿದೆ.