- Kannada News Photo gallery Cricket photos IPL 2024 Rohit Sharma may join CSK next season says Michael Vaughan
IPL 2024: ಸಿಎಸ್ಕೆಗೆ ರೋಹಿತ್ ಶರ್ಮಾ ನಾಯಕ; ಮಾಜಿ ನಾಯಕನ ಸ್ಫೋಟಕ ಹೇಳಿಕೆ
IPL 2024: ಒಂದು ವೇಳೆ ರೋಹಿತ್ ಶರ್ಮಾ ಮುಂಬೈ ತಂಡವನ್ನು ತೊರೆದರೆ ಮುಂದೆ ಯಾವ ತಂಡ ಸೇರುತ್ತಾರೆ ಎಂಬ ಪ್ರಶ್ನೆ ಮೂಡಿದೆ. ಈ ಬಗ್ಗೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೆಲ್ ವಾನ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
Updated on: Apr 13, 2024 | 6:36 PM

ಐಪಿಎಲ್ನ ಅತ್ಯಂತ ಯಶಸ್ವಿ ನಾಯಕ ರೋಹಿತ್ ಶರ್ಮಾರನ್ನು ಮುಂಬೈ ಫ್ರಾಂಚೈಸಿ ಏಕಾಏಕಿ ನಾಯಕತ್ವದಿಂದ ಕೆಳಗಿಳಿಸಿದ ಬಳಿಕ ಭುಗಿಲೆದ್ದ ಆಕ್ರೋಶ ಐಪಿಎಲ್ನ ಮೊದಲಾರ್ಥ ಮುಗಿದರೂ ಇನ್ನು ತಣ್ಣಗಾಗಿಲ್ಲ. ರೋಹಿತ್ ಶರ್ಮಾ ಬಗ್ಗೆ ಐಪಿಎಲ್ ಆರಂಭದಿಂದಲೂ ಕೇಳಲಾರಂಭಿಸಿದ ಊಹಾಪೋಹಗಳಿಗೆ ಹೊಸ ವದಂತಿಯೊಂದು ಸೇರ್ಪಡೆಗೊಂಡಿದೆ.

ಸದ್ಯಕ್ಕೆ ಕ್ರಿಕೆಟ್ ಲೋಕದಲ್ಲಿ ಚರ್ಚೆ ಇರುವ ಸಂಗತಿಯೆಂದರೆ ಅದು ಮುಂದಿನ ಆವೃತ್ತಿಗೂ ಮುನ್ನ ರೋಹಿತ್ ಶರ್ಮಾ ಮುಂಬೈ ಫ್ರಾಂಚೈಸಿಯನ್ನು ತೊರೆಯುತ್ತಾರೆ ಎಂಬುದು. ಇದಕ್ಕೆ ಪೂರಕವಾಗಿ ನಾಯಕತ್ವವನ್ನು ಕಸಿದುಕೊಂಡ ಕಾರಣ, ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ನಡುವೆ ಎಲ್ಲವೂ ಸರಿಯಾಗಿಲ್ಲ. ಪಂದ್ಯದ ವೇಳೆಯೂ ರೋಹಿತ್ ಮತ್ತು ಹಾರ್ದಿಕ್ ನಡುವೆ ಸಮನ್ವಯವಿಲ್ಲ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ.

ಒಂದು ವೇಳೆ ರೋಹಿತ್ ಶರ್ಮಾ ಮುಂಬೈ ತಂಡವನ್ನು ತೊರೆದರೆ ಮುಂದೆ ಯಾವ ತಂಡ ಸೇರುತ್ತಾರೆ ಎಂಬ ಪ್ರಶ್ನೆ ಮೂಡಿದೆ. ಈ ಬಗ್ಗೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೆಲ್ ವಾನ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ರೋಹಿತ್ ಶರ್ಮಾ ಬಗ್ಗೆ ಬಿಯರ್‌ಬೈಸೆಪ್ಸ್ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಇಂಗ್ಲೆಂಡ್‌ನ ಮಾಜಿ ನಾಯಕ ಮೈಕೆಲ್ ವಾನ್ ಮೊದಲನೆಯದಾಗಿ, ರೋಹಿತ್ ಶರ್ಮಾ ಅವರಿಂದ ನಾಯಕತ್ವವನ್ನು ಕಿತ್ತುಕೊಂಡಿರುವುದು ತಪ್ಪು. ರೋಹಿತ್ ಶರ್ಮಾ ಇನ್ನೂ 2 ಸೀಸನ್‌ಗಳ ಕಾಲ ನಾಯಕನಾಗಿ ಉಳಿಯಬೇಕಿತ್ತು ಎಂದಿದ್ದಾರೆ.

ಆದರೆ ಫ್ರಾಂಚೈಸಿ ಅವರಿಂದ ನಾಯಕತ್ವವನ್ನು ಕಿತ್ತು ಹಾರ್ದಿಕ್ ಪಾಂಡ್ಯಗೆ ಹಸ್ತಾಂತರಿಸಿದ್ದು, ಇದು ಸರಿಯಾದ ನಿರ್ಧಾರವಲ್ಲ. ಹೀಗಾಗಿ ಮೆಗಾ ಹರಾಜಿಗೂ ಮುನ್ನ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್‌ಗೆ ವಿದಾಯ ಹೇಳಬಹುದು ಎಂದಿದ್ದಾರೆ.

ಒಂದು ವೇಳೆ ರೋಹಿತ್ ಶರ್ಮಾ ಮುಂಬೈ ಫ್ರಾಂಚೈಸಿಯನ್ನು ತೊರೆದರೆ ಯಾವ ತಂಡದೊಂದಿಗೆ ಹೋಗಬಹುದು ಎಂದು ಕೇಳಿದಾಗ, ಚೆನ್ನೈ ಸೂಪರ್ ಕಿಂಗ್ಸ್‌ನ ಜೆರ್ಸಿಯಲ್ಲಿ ರೋಹಿತ್ ಶರ್ಮಾ ಆಡುವುದನ್ನು ನಾನು ನೋಡಬಹುದು ಎಂದು ಮಾಜಿ ನಾಯಕ ಮೈಕೆಲ್ ವಾನ್ ಹೇಳಿದ್ದಾರೆ.

ಆದರೆ ಮೈಕೆಲ್ ವಾನ್ ಹೇಳಿಕೆ ಎಷ್ಟರ ಮಟ್ಟಿಗೆ ನಿಜವಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ. ಏಕೆಂದರೆ ಧೋನಿ ಬಳಿಕ ಸಿಎಸ್ಕೆ ತಂಡದ ನಾಯಕನಾಗಿರುವ ರುತುರಾಜ್ ಗಾಯಕ್ವಾಡ್ ತಂಡವನ್ನು ಉತ್ತಮವಾಗಿ ಮುನ್ನಡೆಸುತ್ತಿದ್ದಾರೆ. ಅವರ ನಾಯಕತ್ವದಲ್ಲಿ ತಂಡ ಅದ್ಭುತ ಪ್ರದರ್ಶನ ನೀಡುತ್ತಿದೆ. ಹೀಗಿರುವಾಗ ಸಿಎಸ್ಕೆ ಫ್ರಾಂಚೈಸಿ ಉದಯೋನ್ಮುಖ ನಾಯಕನಿಂದ ನಾಯಕತ್ವ ಕಿತ್ತುಕೊಳ್ಳುವ ಕೆಲಸ ಮಾಡುವುದಿಲ್ಲ ಎಂಬುದು ಪರಿಣಿತರ ಅಭಿಪ್ರಾಯವಾಗಿದೆ.




