
ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) 17ನೇ ಆವೃತ್ತಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಯುವ ದಾಂಡಿಗ ಅಭಿಷೇಕ್ ಶರ್ಮಾ ತಮ್ಮ ಸ್ಪೋಟಕ ಬ್ಯಾಟಿಂಗ್ ಅನ್ನು ಮುಂದುವರೆಸಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ಕೇವಲ 23 ಎಸೆತಗಳಲ್ಲಿ 63 ರನ್ ಬಾರಿಸಿ ಅಬ್ಬರಿಸಿದ್ದ ಅಭಿ, ಇದೀಗ ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ ಕೇವಲ 12 ಎಸೆತಗಳಲ್ಲಿ 37 ರನ್ ಚಚ್ಚಿದ್ದಾರೆ.

ಈ ಮೂಲಕ ಸ್ಪೋಟಕ ಬ್ಯಾಟಿಂಗ್ ಮುಂದುವರೆಸಿರುವ ಅಭಿಷೇಕ್ 4 ಪಂದ್ಯಗಳಿಂದ ಒಟ್ಟು 161 ರನ್ ಕಲೆಹಾಕಿದ್ದಾರೆ. ಇತ್ತ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪ್ರದರ್ಶಿಸಿದ ವಿಸ್ಪೋಟಕ ಬ್ಯಾಟಿಂಗ್ ಪರಿಣಾಮ ಯುವ ಎಡಗೈ ದಾಂಡಿಗನಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿಯಿತು.

ಈ ಪ್ರಶಸ್ತಿಯನ್ನು ಪಡೆದ ಬಳಿಕ ಮಾತನಾಡಿದ ಅಭಿಷೇಕ್, ಈ ಸಂತಸದ ಸಮಯದಲ್ಲಿ ನಾನು ಯುವರಾಜ್ ಸಿಂಗ್, ಬ್ರಿಯಾನ್ ಲಾರಾ ಹಾಗೂ ನಮ್ಮ ತಂದೆಗೆ ಧನ್ಯವಾದಗಳು ಹೇಳಲು ಬಯಸುತ್ತೇನೆ. ನನ್ನ ಬ್ಯಾಟಿಂಗ್ನಲ್ಲಿ ಇವರ ಕೊಡುಗೆ ತುಂಬಾ ಇದೆ ಎಂದಿದ್ದರು. ಇಲ್ಲಿ ಬ್ರಿಯಾನ್ ಲಾರಾ ಈ ಹಿಂದೆ ಎಸ್ಆರ್ಹೆಚ್ ತಂಡದ ಕೋಚ್ ಆಗಿದ್ದರು. ಹೀಗಾಗಿ ಅಭಿಷೇಕ್ ಮಾಜಿ ಕೋಚ್ಗೆ ಧನ್ಯವಾದ ತಿಳಿಸಿದ್ದರು.

ಆದರೆ ಯುವರಾಜ್ ಸಿಂಗ್ ಹೆಸರನ್ನು ಪ್ರಸ್ತಾಪಿಸುವ ಮೂಲಕ ಅಭಿಷೇಕ್ ಎಲ್ಲರ ಗಮನ ಸೆಳೆದರು. ಇದಕ್ಕೆ ಮುಖ್ಯ ಕಾರಣ ಅಭಿಷೇಕ್ ಯುವರಾಜ್ ಸಿಂಗ್ ಗರಡಿಯಲ್ಲಿ ಪಳಗಿದ ಹುಡುಗ. ಈ ಹಿಂದೆ ಪಂಜಾಬ್ನ ಹಲವು ಯುವ ಆಟಗಾರರಿಗೆ ಯುವರಾಜ್ ಸಿಂಗ್ ತರಬೇತಿ ನೀಡಿದ್ದಾರೆ.

ಅಭಿಷೇಕ್ ಶರ್ಮಾ, ಶುಭ್ಮನ್ ಗಿಲ್, ಪ್ರಭ್ ಸಿಮ್ರಾನ್ ಸಿಂಗ್ ಸೇರಿದಂತೆ ಪಂಜಾಬ್ನ ಯುವ ಆಟಗಾರರಿಗೆ ಯುವರಾಜ್ ಸಿಂಗ್ ವಿಶೇಷ ಟ್ರೈನಿಂಗ್ ನೀಡಿದ್ದರು. ಇದೇ ವೇಳೆ ಯುವ ದಾಂಡಿಗರ ಬ್ಯಾಟಿಂಗ್ನಲ್ಲಿನ ತಪ್ಪುಗಳನ್ನು ತಿದ್ದುವಂತಹ ಕೆಲಸವನ್ನು ಮಾಡಿದ್ದಾರೆ. ಅಲ್ಲದೆ ಪಂಜಾಬ್ನ ಯುವ ಆಟಗಾರರಿಗೆ ಆತ್ಮವಿಶ್ವಾಸ ತುಂಬುವಲ್ಲಿ ಯುವಿ ಪಾತ್ರ ಬಹಳ ದೊಡ್ಡದು.

ಹೀಗಾಗಿಯೇ ಎಡಗೈ ದಾಂಡಿಗನಾಗಿರುವ ಅಭಿಷೇಕ್ ಶರ್ಮಾ ಯುವರಾಜ್ ಸಿಂಗ್ ಅವರನ್ನು ರೋಲ್ ಮಾಡೆಲ್ ಆಗಿ ಇರಿಸಿದ್ದಾರೆ. ಇದೀಗ ಐಪಿಎಲ್ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ತನ್ನ ಗುರುವಿಗೆ ಧನ್ಯವಾದ ತಿಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.