- Kannada News Photo gallery Cricket photos IPL 2024: CSK Defeated Punjab Kings After A long 1,115 Days
IPL 2024: 1,115 ದಿನಗಳ ಬಳಿಕ ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದ CSK
IPL 2024 CSK vs PBKS: ಈ ಬಾರಿಯ ಐಪಿಎಲ್ನ (IPL 2024) ಮೊದಲ ಮುಖಾಮುಖಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ತಂಡವು 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತ್ತು. ಇದೀಗ ಪಂಜಾಬ್ ಕಿಂಗ್ಸ್ ತಂಡಕ್ಕೆ ಸೋಲುಣಿಸುವಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಯಶಸ್ವಿಯಾಗಿದೆ. ಈ ಮೂಲಕ ಸಿಎಸ್ಕೆ ತಂಡವು ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ.
Updated on: May 06, 2024 | 7:38 AM

ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) 53ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಜಯ ಸಾಧಿಸಿದೆ. ಧರ್ಮಶಾಲಾದ ಹೆಚ್ಪಿಸಿಎ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡದ ಹಂಗಾಮಿ ನಾಯಕ ಸ್ಯಾಮ್ ಕರನ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಅಜಿಂಕ್ಯ ರಹಾನೆ (9) ಬೇಗನೆ ವಿಕೆಟ್ ಒಪ್ಪಿಸಿ ಹೊರ ನಡೆದರೆ, ಆ ಬಳಿಕ ರುತುರಾಜ್ ಗಾಯಕ್ವಾಡ್ (32) ಔಟಾದರು. ಇನ್ನು ಶಿವಂ ದುಬೆ (0) ಶೂನ್ಯದೊಂದಿಗೆ ಪೆವಿಲಿಯನ್ಗೆ ಹಿಂತಿರುಗಿದರು.

ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ರವೀಂದ್ರ ಜಡೇಜಾ 26 ಎಸೆತಗಳಲ್ಲಿ 43 ರನ್ ಬಾರಿಸಿದರು. ಈ ರನ್ಗಳೊಂದಿಗೆ ಸಿಎಸ್ಕೆ ತಂಡವು 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 167 ರನ್ ಕಲೆಹಾಕಿತು.

168 ರನ್ಗಳ ಸ್ಪರ್ಧಾತ್ಮಕ ಗುರಿ ಪಡೆದ ಪಂಜಾಬ್ ಕಿಂಗ್ಸ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಸಿಎಸ್ಕೆ ವೇಗಿ ತುಷಾರ್ ದೇಶಪಾಂಡೆ ಯಶಸ್ವಿಯಾದರು. 2ನೇ ಓವರ್ನಲ್ಲಿ ಜಾನಿ ಬೈರ್ಸ್ಟೋವ್ (7), ರೈಲಿ ರೊಸ್ಸೊವ್ (0) ವಿಕೆಟ್ ಕಬಳಿಸಿದ ತುಷಾರ್ ಸಿಎಸ್ಕೆ ತಂಡಕ್ಕೆ ಆರಂಭದಲ್ಲೇ ಯಶಸ್ಸು ತಂದುಕೊಟ್ಟರು.

ಪಂಜಾಬ್ ಕಿಂಗ್ಸ್ ತಂಡವು ಆರಂಭಿಕ ಆಘಾತದಿಂದ ಪಾರಾಗುವ ಮುನ್ನವೇ ಸಿಎಸ್ಕೆ ಬೌಲರ್ಗಳು ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಪರಿಣಾಮ 69 ರನ್ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಅಂತಿಮವಾಗಿ 20 ಓವರ್ಗಳಲ್ಲಿ 9 ವಿಕೆಟ್ ಕಬಳಿಸಿದ ಸಿಎಸ್ಕೆ ಪಂಜಾಬ್ ಕಿಂಗ್ಸ್ ತಂಡವನ್ನು 139 ರನ್ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಈ ಮೂಲಕ CSK 28 ರನ್ಗಳ ಭರ್ಜರಿ ಜಯ ಸಾಧಿಸಿದೆ.

ಇದು 1,115 ದಿನಗಳ ಬಳಿಕ ಸಿಎಸ್ಕೆ ತಂಡಕ್ಕೆ ಸಿಕ್ಕ ಗೆಲುವು ಎಂಬುದು ವಿಶೇಷ. ಅಂದರೆ ಪಂಜಾಬ್ ಕಿಂಗ್ಸ್ ತಂಡವನ್ನು ಸಿಎಸ್ಕೆ ತಂಡ ಸೋಲಿಸಿ ಬರೋಬ್ಬರಿ 1,115 ದಿನಗಳಾಗಿತ್ತು. ಐಪಿಎಲ್ 2021 ರಿಂದ ಪಂಜಾಬ್ ಕಿಂಗ್ಸ್ ತಂಡವು ಸಿಎಸ್ಕೆ ವಿರುದ್ಧ ಸತತವಾಗಿ ಗೆಲುವು ಸಾಧಿಸುತ್ತಾ ಬಂದಿದೆ.

ಈ ವೇಳೆ ಆಡಿದ 5 ಪಂದ್ಯಗಳಲ್ಲೂ ಸಿಎಸ್ಕೆಗೆ ಸೋಲುಣಿಸಿ ಪಂಜಾಬ್ ಕಿಂಗ್ಸ್ ಪಾರುಪತ್ಯ ಮೆರೆದಿದೆ. ಇದೀಗ 1,115 ದಿನಗಳ ಬಳಿಕ ಈ ಸೋಲಿನ ಸಂಕೋಲೆಯಿಂದ ಹೊರಬರುವಲ್ಲಿ ಕೊನೆಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡ ಯಶಸ್ವಿಯಾಗಿರುವುದು ವಿಶೇಷ.




