
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL 2024) ಮೆಂಟರ್ ಆಗಿ ಹೊಸ ಇನಿಂಗ್ಸ್ ಆರಂಭಿಸಿರುವ ಗೌತಮ್ ಗಂಭೀರ್ (Gautam Gambhir) ಮೂರನೇ ಬಾರಿಗೆ ಯಶಸ್ಸಿನ ತುದಿಗೆ ತಲುಪಿದ್ದಾರೆ. ಅದು ಕೂಡ ತಮ್ಮ ತಂಡವನ್ನು ಪ್ಲೇಆಫ್ ಹಂತಕ್ಕೇರಿಸುವ ಮೂಲಕ ಎಂಬುದು ವಿಶೇಷ.

ಅಂದರೆ ಐಪಿಎಲ್ 2022 ಮತ್ತು 2023 ರಲ್ಲಿ ಗೌತಮ್ ಗಂಭೀರ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿ ಕಾಣಿಸಿಕೊಂಡಿದ್ದರು. ಯುವ ಆಟಗಾರರೊಂದಿಗೆ ತಮ್ಮ ಅನುಭವವನ್ನು ಧಾರೆಯೆರೆದಿದ್ದ ಗಂಭೀರ್ LSG ತಂಡ ಬ್ಯಾಕ್ ಟು ಬ್ಯಾಕ್ ಪ್ಲೇಆಫ್ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಇದೇ ಕಾರಣದಿಂದಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಈ ಬಾರಿಯ ಐಪಿಎಲ್ಗೂ ಮುನ್ನ ತನ್ನ ಮಾಜಿ ನಾಯಕನನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಅದರಂತೆ ಈ ಬಾರಿ ಕೆಕೆಆರ್ ತಂಡದ ಮೆಂಟರ್ ಆಗಿ ಕಾಣಿಸಿಕೊಂಡ ಗಂಭೀರ್ ಅವರ ಕಾರ್ಯವೈಖರಿಯನ್ನು ಸುನಿಲ್ ನರೈನ್, ಆ್ಯಂಡ್ರೆ ರಸೆಲ್ ಸೇರಿದಂತೆ ಯುವ ಆಟಗಾರರು ಹಾಡಿ ಹೊಗಳುತ್ತಿದ್ದಾರೆ.

ಗಂಭೀರ್ ಅವರ ಈ ಅದ್ಭುತ ಮಾರ್ಗದರ್ಶನದಿಂದಾಗಿ ಈ ಬಾರಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ನಿರೀಕ್ಷೆಗಿಂತ ಉತ್ತಮ ಪ್ರದರ್ಶನ ನೀಡಿದೆ. ಅಲ್ಲದೆ 12 ಪಂದ್ಯಗಳಲ್ಲಿ 9 ಜಯ ಸಾಧಿಸಿ ಈಗಾಗಲೇ ಪ್ಲೇಆಫ್ ಅರ್ಹತೆ ಗಿಟ್ಟಿಸಿಕೊಂಡಿದೆ. ಈ ಮೂಲಕ ಐಪಿಎಲ್ 2024 ರಲ್ಲಿ ಪ್ಲೇಆಫ್ ಪ್ರವೇಶಿಸಿದ ಮೊದಲ ತಂಡ ಎನಿಸಿಕೊಂಡಿದೆ.

ಇದರ ಬೆನ್ನಲ್ಲೇ ಕೆಕೆಆರ್ ತಂಡದ ಮೆಂಟರ್ ಗೌತಮ್ ಗಂಭೀರ್ ಅವರ ಕಾರ್ಯ ವೈಖರಿ ಬಗ್ಗೆ ಅಭಿಮಾನಿಗಳಿಂದ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದ್ದು, ಇತ್ತ ಗಂಭೀರ್ ಕೂಡ ಹ್ಯಾಟ್ರಿಕ್ ಫ್ಲೇಆಫ್ನ ಖುಷಿಯಲ್ಲಿದ್ದಾರೆ. ಒಟ್ಟಿನಲ್ಲಿ ಕೆಕೆಆರ್ ಪರ ಹೊಸ ಇನಿಂಗ್ಸ್ ಆರಂಭಿಸಿರುವ ಗಂಭೀರ್ ಇದೀಗ ಕೋಚ್ ಚಂದ್ರಕಾಂತ್ ಪಂಡಿತ್ ಜೊತೆಗೂಡಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಮೂರನೇ ಬಾರಿಗೆ ಚಾಂಪಿಯನ್ ಪಟ್ಟ ತಂದು ಕೊಡಲಿದ್ದಾರಾ ಕಾದು ನೋಡಬೇಕಿದೆ.