
ವಿಶ್ವದೆಲ್ಲೆಡೆ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಕ್ರೇಝ್ ಕಾವೇರುತ್ತಿದೆ. ಇದಕ್ಕೆ ಪಕ್ಕದ ಪಾಕಿಸ್ತಾನ್ ಕೂಡ ಹೊರತಾಗಿಲ್ಲ. ಐಪಿಎಲ್ ತಂಡಗಳನ್ನು ತಮ್ಮ ನೆಚ್ಚಿನ ಟೀಮ್ಗಳಾಗಿ ಆಯ್ಕೆ ಮಾಡಿಕೊಂಡಿರುವ ಹಲವು ಪಾಕ್ ಕ್ರಿಕೆಟ್ ಪ್ರೇಮಿಗಳಿದ್ದಾರೆ. ಪಾಕಿಸ್ತಾನ್ ಆಟಗಾರರು ಕೂಡ ಐಪಿಎಲ್ ಆಡಬೇಕೆಂಬುದು ಅವರ ಅಂಬೋಣ. ಆದರೆ ಈ ಆಸೆಗೆ ಬಿಸಿಸಿಐ ಕಳೆದ 15 ವರ್ಷಗಳಿಂದ ತಣ್ಣೀರೆರಚುತ್ತಾ ಬಂದಿದೆ.

ಇದೀಗ ಐಪಿಎಲ್ ಸೀಸನ್ 17 ಕ್ಕೂ ಮುನ್ನ ಮತ್ತೊಮ್ಮೆ ಪಾಕ್ ಕ್ರಿಕೆಟ್ ಪ್ರೇಮಿಯೊಬ್ಬರು ತಮ್ಮ ಮನದಿಂಗಿತವನ್ನು ವ್ಯಕ್ತಪಡಿಸಿದ್ದಾರೆ. ಅದು ಕೂಡ ಪಾಕಿಸ್ತಾನದ ಸ್ಟಾರ್ ಆಟಗಾರರು ಐಪಿಎಲ್ನಲ್ಲಿ ಕಾಣಿಸಿಕೊಳ್ಳಬೇಕೆಂಬ ಕನಸಿನೊಂದಿಗೆ ಎಂಬುದು ವಿಶೇಷ.

ಈ ಬಗ್ಗೆ ಅಲಿ ರಾಝ ಆಲಂ ಎಂಬ ವ್ಯಕ್ತಿಯು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ವೊಂದನ್ನು ಹಾಕಿದ್ದಾರೆ. ಈ ಪೋಸ್ಟ್ನಲ್ಲಿ ಆರ್ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ ಮತ್ತು ಬಾಬರ್ ಆಝಂ ಅವರನ್ನು ಜೊತೆಯಾಗಿ ನೋಡುವ ಆಸೆಯಿದೆ. ಇದು ಅನೇಕ ಭಾರತೀಯ ಮತ್ತು ಪಾಕಿಸ್ತಾನಿ ಕ್ರಿಕೆಟ್ ಅಭಿಮಾನಿಗಳ ಬಹುದಿನಗಳ ಕನಸು ಎಂದು ಬರೆದುಕೊಂಡಿದ್ದಾರೆ.

ಅಷ್ಟೇ ಅಲ್ಲದೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ಜಸ್ಪ್ರೀತ್ ಬುಮ್ರಾ ಜೊತೆ ಶಾಹೀನ್ ಅಫ್ರಿದಿ, ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಮಹೇಂದ್ರ ಸಿಂಗ್ ಧೋನಿ ಜೊತೆ ಮೊಹಮ್ಮದ್ ರಿಝ್ವಾನ್ ಕಣಕ್ಕಿಳಿಯುವುದನ್ನು ಎದುರು ನೋಡುತ್ತಿರುವುದಾಗಿ ಅಲಿ ರಾಝ ಆಲಂ ತಿಳಿಸಿದ್ದಾರೆ.

ಈ ಪೋಸ್ಟ್ ಟೀಮ್ ಇಂಡಿಯಾ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರ ಕಣ್ಣಿಗೆ ಬಿದ್ದಿದೆ. ಅಲ್ಲದೆ ಇದಕ್ಕೆ ಭಜ್ಜಿ ಗೂಗ್ಲಿ ರಿಪ್ಲೈ ಕೂಡ ನೀಡಿದ್ದಾರೆ. ರಾಝ ಅವರ ಪೋಸ್ಟ್ಗೆ ಪ್ರತ್ಯುತ್ತರ ನೀಡಿರುವ ಹರ್ಭಜನ್ ಸಿಂಗ್, ಭಾರತೀಯರಿಗೆ ಇಂತಹ ಯಾವುದೇ ಕನಸುಗಳಿಲ್ಲ. ದಯವಿಟ್ಟು ನೀವು ಕನಸು ಕಾಣುವುದನ್ನು ನಿಲ್ಲಿಸಿ ಎಂದು ಟ್ರೋಲ್ ಮಾಡಿದ್ದಾರೆ.

ಈ ಮೂಲಕ ವಿರಾಟ್ ಕೊಹ್ಲಿ-ಬಾಬರ್, ಬುಮ್ರಾ-ಶಾಹೀನ್, ಧೋನಿ-ರಿಝ್ವಾನ್ ಜೋಡಿಗಳನ್ನು ಐಪಿಎಲ್ನಲ್ಲಿ ಜೊತೆಯಾಗಿ ನೋಡಲು ಭಾರತ-ಪಾಕಿಸ್ತಾನ್ ಕ್ರಿಕೆಟ್ ಪ್ರೇಮಿಗಳು ಕನಸು ಕಾಣುತ್ತಿದ್ದಾರೆ ಎಂದ ಅಭಿಮಾನಿಗೆ, ನೀವು ಕನಸು ಕಾಣುವುದನ್ನು ನಿಲ್ಲಿಸಿ ನಿದ್ದೆಯಿಂದ ಎದ್ದೇಳಿ ಎಂದು ಹರ್ಭಜನ್ ಸಿಂಗ್ ಖಡಕ್ ಉತ್ತರ ಕೊಟ್ಟಿದ್ದಾರೆ. ಈ ಮೂಲಕ ಭಾರತೀಯರಿಗೆ ಅಂತಹ ಯಾವುದೇ ಕನಸುಗಳಿಲ್ಲ ಎಂದಿದ್ದಾರೆ. ಇದೀಗ ಭಜ್ಜಿಯ ಗೂಗ್ಲಿ ರಿಪ್ಲೈ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಭಾರೀ ಮೆಚ್ಚುಗೆ ಪಡೆದುಕೊಂಡಿದೆ.