
ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಸನ್ರೈಸರ್ಸ್ ಹೈದರಾಬಾದ್ (SRH) ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ (KKR) ನಡುವಣ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಅದರಲ್ಲೂ ಈ ಪಂದ್ಯದಲ್ಲಿ ಕೆಕೆಆರ್ ವೇಗಿ ಹರ್ಷಿತ್ ರಾಣಾ (Harshit Rana) ಹಾಗೂ ಎಸ್ಆರ್ಹೆಚ್ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ (Mayank Agarwal) ನಡುವೆ ಜಿದ್ದಾಜಿದ್ದಿನ ಪೈಪೋಟಿ ಕಂಡು ಬಂತು.

ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಮಯಾಂಕ್ ಅಗರ್ವಾಲ್ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಕೆಕೆಆರ್ ವೇಗದ ಬೌಲರ್ ಹರ್ಷಿತ್ ರಾಣಾರನ್ನು ಟಾರ್ಗೆಟ್ ಮಾಡಿದ್ದ ಮಯಾಂಕ್ ಸಿಕ್ಸ್-ಫೋರ್ಗಳನ್ನು ಬಾರಿಸಿ ಉತ್ತಮ ಆರಂಭ ಒದಗಿಸಿದ್ದರು.

ಇತ್ತ ಹರ್ಷಿಕ್ ರಾಣಾ ಕೂಡ ಮಾಯಾಂಕ್ ಅಗರ್ವಾಲ್ ವಿಕೆಟ್ಗಾಗಿ ಪರಿತಪಿಸುತ್ತಿದ್ದರು. ಅದರಂತೆ ರಾಣಾ ಎಸೆದ 6ನೇ ಓವರ್ನ ಮೂರನೇ ಎಸೆತವನ್ನು ಮಯಾಂಕ್ ಲೈಗ್ ಸೈಡ್ನತ್ತ ಬಾರಿಸಿದ್ದರು. ಆದರೆ ಅದಾಗಲೇ ಕ್ಯಾಚ್ಗಾಗಿ ಬೌಂಡರಿ ಲೈನ್ ಬಳಿ ಕಾದು ಕುಳಿತಿದ್ದ ರಿಂಕು ಸಿಂಗ್ ಚೆಂಡನ್ನು ಹಿಡಿದರು.

ಮಯಾಂಕ್ ಅಗರ್ವಾಲ್ ಅವರ ವಿಕೆಟ್ ಸಿಗುತ್ತಿದ್ದಂತೆ ಹರ್ಷಿತ್ ರಾಣಾ ಫ್ಲೈಯಿಂಗ್ ಕಿಸ್ ಕೊಡುವ ಮೂಲಕ ಬೀಳ್ಕೊಟ್ಟರು. ಇದರಿಂದ ಕುಪಿತಗೊಂಡ ಮಯಾಂಕ್ ಅಗರ್ವಾಲ್ ರಾಣಾರನ್ನು ಗುರಾಯಿಸಲಾರಂಭಿಸಿದರು.

ಅಲ್ಲದೆ ಹರ್ಷಿತ್ ರಾಣಾರನ್ನು ದಿಟ್ಟಿಸುತ್ತಾ ಮಯಾಂಕ್ ಅಗರ್ವಾಲ್ ಪೆವಿಲಿಯನ್ನತ್ತ ಹೆಜ್ಜೆಹಾಕಿದರು. ಇತ್ತ ರಾಣಾ ಕೂಡ ಮಯಾಂಕ್ ಕಣ್ಣೋಟಕ್ಕೆ ಕಣ್ಣು ನೀಡುವ ಮೂಲಕ ತಾನೇನು ಕಮ್ಮಿಯಿಲ್ಲ ಎಂಬುದನ್ನು ತೋರಿಸಿದರು. ಇದೀಗ ಭಾರತೀಯ ಆಟಗಾರಿಬ್ಬರ ಈ ಜಿದ್ದಾಜಿದ್ದಿನ ಕಣ್ಣೋಟವು ಮುಂದಿನ ಹಂತಕ್ಕೋಗುವ ಸೂಚನೆಯಿದೆ.

ಅಂದರೆ ಉಭಯ ತಂಡಗಳು ಹೈದರಾಬಾದ್ನಲ್ಲಿ ಮತ್ತೊಮ್ಮೆ ಮುಖಾಮುಖಿಯಾಗಲಿದ್ದು, ಈ ವೇಳೆ ಹರ್ಷಿತ್ ರಾಣಾ ಹಾಗೂ ಮಯಾಂಕ್ ಅಗರ್ವಾಲ್ ನಡುವಣ ಕಣ್ಣಲ್ಲೇ ಕಿತ್ತಾಟ ಮುಂದುವರೆಯುವ ಸಾಧ್ಯತೆಯಿದೆ.

ಇದಾಗ್ಯೂ ಈ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಹರ್ಷಿತ್ ರಾಣಾ ಯಶಸ್ವಿಯಾದರು. ಕೊನೆಯ ಓವರ್ನಲ್ಲಿ 13 ರನ್ಗಳ ಗುರಿ ಪಡೆದಿದ್ದ ಎಸ್ಆರ್ಹೆಚ್ ತಂಡವನ್ನು 204 ರನ್ಗಳಿಗೆ ನಿಯಂತ್ರಿಸುವ ಮೂಲಕ ಹರ್ಷಿತ್ ರಾಣಾ ಕೆಕೆಆರ್ ತಂಡಕ್ಕೆ 4 ರನ್ಗಳ ರೋಚಕ ಜಯ ತಂದುಕೊಟ್ಟರು.