ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ರಲ್ಲಿ ಕರ್ನಾಟಕದ 12 ಆಟಗಾರರಿದ್ದಾರೆ. ಇವರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲೇ ಮೂವರಿದ್ದಾರೆ. ಅದರಲ್ಲೂ ಎಲ್ಎಸ್ಜಿ ತಂಡವನ್ನು ಮುನ್ನಡೆಸುತ್ತಿರುವುದು ಕರ್ನಾಟಕದ ಆಟಗಾರ ಕೆಎಲ್ ರಾಹುಲ್ (KL Rahul) ಎಂಬುದು ವಿಶೇಷ. ಈ ಹಿಂದೆ ಆರ್ಸಿಬಿ ತಂಡವನ್ನು ಪ್ರತಿನಿಧಿಸಿದ್ದ ಕೆಎಲ್ಆರ್ ಇದೀಗ ಮತ್ತೆ ತವರು ತಂಡದ ಪರ ಕಣಕ್ಕಿಳಿಯಬೇಕೆಂಬ ಇಂಗಿತಯನ್ನು ವ್ಯಕ್ತಪಡಿಸಿದ್ದಾರೆ.
ರವಿಚಂದ್ರನ್ ಅಶ್ವಿನ್ ಅವರ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಕಾಣಿಸಿಕೊಂಡ ಕೆಎಲ್ ರಾಹುಲ್ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಆರ್ಸಿಬಿ ಪರ ಆಡಬೇಕೆಂಬ ತಮ್ಮ ಮನದಾಳದ ಆಸೆಯನ್ನು ತೆರೆದಿಟ್ಟಿದ್ದಾರೆ.
ಈ ಬಗ್ಗೆ ಮಾತನಾಡಿದ ಕೆಎಲ್ ರಾಹುಲ್, ನಾನು ಮೊದಲು ಕರ್ನಾಟಕದ ಆಟಗಾರ. ಅದರಲ್ಲೂ ಬೆಂಗಳೂರಿನವ. ಈ ಅಂಶಗಳನ್ನು ಎಂದಿಗೂ ಬದಲಿಸಲು ಸಾಧ್ಯವಿಲ್ಲ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನನಗೆ ತವರು ಮನೆ. ಇದಾದ ಬಳಿಕವಷ್ಟೇ ಐಪಿಎಲ್. ಪ್ರತಿಯೊಬ್ಬ ಆಟಗಾರ ಕೂಡ ತನ್ನ ತವರು ತಂಡದ ಪರ ಆಡಲು ಬಯಸುತ್ತಾರೆ. ಹೀಗಾಗಿ ನಾನು ಸಹ ಬೆಂಗಳೂರು ಪರ ಆಡುವುದು ಸೂಕ್ತ ಎಂದು ರಾಹುಲ್ ಹೇಳಿದ್ದಾರೆ.
ನನ್ನ ನಗರದ ಪರ ಆಡುವುದು ನನ್ನ ಕನಸಾಗಿತ್ತು. ಈ ಹಿಂದೆ ನಾನು ಆರ್ಸಿಬಿ ಪರ ಆಡಿದ್ದೇನೆ. ಈಗ ಮತ್ತೆ ಅದೇ ತಂಡದಲ್ಲಿ ಆಡಲು ಸಾಧ್ಯವಾದರೆ ಇನ್ನೂ ಚೆನ್ನಾಗಿರುತ್ತಿತ್ತು ಎಂದು ಕೆಎಲ್ ರಾಹುಲ್ ಆರ್ಸಿಬಿ ಪರ ಮತ್ತೆ ಕಣಕ್ಕಿಳಿಯುವ ಮನದಿಂಗಿತವನ್ನು ವ್ಯಕ್ತಪಡಿಸಿದ್ದಾರೆ.
2013 ರಲ್ಲಿ ಆರ್ಸಿಬಿ ಪರ ಪಾದಾರ್ಪಣೆ ಮಾಡುವ ಮೂಲಕ ಐಪಿಎಲ್ ಕೆರಿಯರ್ ಆರಂಭಿಸಿದ್ದ ಕೆಎಲ್ ರಾಹುಲ್ ಆ ಬಳಿಕ ತಂಡದಿಂದ ಹೊರಬಿದ್ದಿದ್ದರು. ಇದಾದ ಬಳಿಕ 2016 ರಲ್ಲಿ ಆರ್ಸಿಬಿಗೆ ಮರಳಿದ್ದ ಕೆಎಲ್ಆರ್ 14 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಈ ವೇಳೆ 4 ಅರ್ಧಶತಕಗಳೊಂದಿಗೆ 397 ರನ್ ಬಾರಿಸುವಲ್ಲಿ ಯಶಸ್ವಿಯಾಗಿದ್ದರು.
ಆದರೆ 2017 ರಲ್ಲಿ ಗಾಯಗೊಂಡಿದ್ದ ಕಾರಣ ಕೆಎಲ್ ರಾಹುಲ್ ಅವರನ್ನು ಆರ್ಸಿಬಿ ತಂಡದಿಂದ ಕೈ ಬಿಟ್ಟಿದ್ದರು. ಅದರಂತೆ 2018 ರಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಆಯ್ಕೆಯಾಗಿದ್ದ ರಾಹುಲ್ ಇದೀಗ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿ ಕಣಕ್ಕಿಳಿಯುತ್ತಿದ್ದಾರೆ.
ಐಪಿಎಲ್ ಸೀಸನ್ 18 ಗಾಗಿ ಮೆಗಾ ಹರಾಜು ನಡೆಯಲಿದ್ದು, ಇದಕ್ಕೂ ಮುನ್ನ ಕೆಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ಹೊರಗುಳಿದರೆ ಮಾತ್ರ ಮುಂಬರುವ ಐಪಿಎಲ್ಗಾಗಿ ಆರ್ಸಿಬಿ ಕರ್ನಾಟಕದ ಸ್ಟಾರ್ ಆಟಗಾರನನ್ನು ಖರೀದಿಸಬಹುದು. ಹೀಗಾಗಿ ಕೆಎಲ್ ರಾಹುಲ್ ಮೆಗಾ ಹರಾಜಿಗಾಗಿ ಹೆಸರು ನೀಡಲಿದ್ದಾರಾ ಕಾದು ನೋಡಬೇಕಿದೆ.