IPL 2024: ಪ್ಲೇಆಫ್ ಪ್ರವೇಶಿಸಲು ಯಾವ ತಂಡ ಇನ್ನೆಷ್ಟು ಪಂದ್ಯ ಗೆಲ್ಲಬೇಕು? ಇಲ್ಲಿದೆ ಮಾಹಿತಿ
TV9 Web | Updated By: ಝಾಹಿರ್ ಯೂಸುಫ್
Updated on:
May 06, 2024 | 12:32 PM
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2024) 17ನೇ ಆವೃತ್ತಿಯ ಲೀಗ್ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಇದಾಗ್ಯೂ ಯಾವುದೇ ತಂಡ ಅಧಿಕೃತವಾಗಿ ಪ್ಲೇಆಫ್ ಪ್ರವೇಶಿಸಿಲ್ಲ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಪ್ಲೇಆಫ್ ಪ್ರವೇಶಿಸಲು ಬಹುತೇಕ ತಂಡಗಳಿಂದ ಜಿದ್ದಾಜಿದ್ದಿನ ಹೋರಾಟ ಕಂಡು ಬರಲಿದ್ದು, ಇದರಿಂದ ಕೊನೆಯ ಹಂತದಲ್ಲಿ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು.
1 / 11
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17ರ ಒಟ್ಟು 60 ಪಂದ್ಯಗಳು ಮುಗಿದಿವೆ. ಈ ಪಂದ್ಯಗಳ ಮುಕ್ತಾಯದ ವೇಳೆಗೆ ಪ್ಲೇಆಫ್ ಪ್ರವೇಶಿಸಿರುವುದು ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಮಾತ್ರ. ಅಂದರೆ ಲೀಗ್ ಹಂತದ ಬಹುತೇಕ ಪಂದ್ಯಗಳು ಮುಗಿದರೂ ಪ್ಲೇಆಫ್ ಆಡಲಿರುವ ಇನ್ನುಳಿದ ಮೂರು ತಂಡಗಳಾವುವು ಎಂಬುದು ಇನ್ನೂ ಸಹ ನಿರ್ಧಾರವಾಗಿಲ್ಲ. ಅಂದರೆ ಪ್ರಸ್ತುತ ಸನ್ನಿವೇಶದಲ್ಲಿ ಬಹುತೇಕ ತಂಡಗಳಿಗೆ ಪ್ಲೇಆಫ್ ಪ್ರವೇಶಿಸಲು ಅವಕಾಶವಿದೆ. ಅದರಂತೆ ಯಾವ ತಂಡ ಎಷ್ಟು ಪಂದ್ಯ ಗೆದ್ದರೆ ಪ್ಲೇಆಫ್ಗೆ ಎಂಟ್ರಿ ಕೊಡಲಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ..
2 / 11
1- ಕೊಲ್ಕತ್ತಾ ನೈಟ್ ರೈಡರ್ಸ್ (Q): ಪ್ರಸ್ತುತ ಪಾಯಿಂಟ್ಸ್ ಟೇಬಲ್ನಲ್ಲಿ ಕೆಕೆಆರ್ ತಂಡ ಅಗ್ರಸ್ಥಾನದಲ್ಲಿದೆ. ಈವರೆಗೆ ಆಡಿರುವ 12 ಪಂದ್ಯಗಳಲ್ಲಿ 9 ಜಯ ಸಾಧಿಸಿರುವ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 18 ಅಂಕಗಳೊಂದಿಗೆ ಪ್ಲೇಆಫ್ಗೆ ಅರ್ಹತೆ ಪಡೆದುಕೊಂಡಿದೆ. ಇನ್ನುಳಿದ 2 ಮ್ಯಾಚ್ಗಳಲ್ಲಿ ಕೆಕೆಆರ್ ತಂಡ ಸೋತರೂ ಪ್ಲೇಆಫ್ನಿಂದ ಹೊರಬೀಳುವುದಿಲ್ಲ.
3 / 11
2- ರಾಜಸ್ಥಾನ್ ರಾಯಲ್ಸ್: ಆರ್ಆರ್ ತಂಡವು ಈವರೆಗೆ 11 ಪಂದ್ಯಗಳನ್ನಾಡಿದೆ. ಈ ವೇಳೆ 8 ಜಯ ಸಾಧಿಸಿರುವ ರಾಜಸ್ಥಾನ್ ರಾಯಲ್ಸ್ 16 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಮುಂದಿನ 3 ಪಂದ್ಯಗಳಲ್ಲಿ 1 ಜಯ ಸಾಧಿಸಿದರೆ ಅಧಿಕೃತವಾಗಿ ಪ್ಲೇಆಫ್ಗೆ ಪ್ರವೇಶಿಸಲಿದೆ.
4 / 11
4- ಚೆನ್ನೈ ಸೂಪರ್ ಕಿಂಗ್ಸ್: 12 ಪಂದ್ಯಗಳಲ್ಲಿ 6 ಜಯ ಸಾಧಿಸಿರುವ ಸಿಎಸ್ಕೆ ತಂಡವು 12 ಪಾಯಿಂಟ್ಸ್ನೊಂದಿಗೆ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮುಂದಿನ 2 ಪಂದ್ಯಗಳಲ್ಲೂ ಜಯ ಸಾಧಿಸಿದರೆ ಮಾತ್ರ ಚೆನ್ನೈ ಸೂಪರ್ ಕಿಂಗ್ಸ್ ಅಧಿಕೃತವಾಗಿ ಪ್ಲೇಆಫ್ ಪ್ರವೇಶಿಸಲಿದೆ. ಇನ್ನು ಈ ಪಂದ್ಯಗಳಲ್ಲಿ ಒಂದು ಮ್ಯಾಚ್ ಅನ್ನು ಮಾತ್ರ ಗೆದ್ದರೆ ಇಲ್ಲಿ ನೆಟ್ ರನ್ ರೇಟ್ ಗಣನೆಗೆ ಬರಲಿದೆ.
5 / 11
3- ಸನ್ರೈಸರ್ಸ್ ಹೈದರಾಬಾದ್: ಎಸ್ಆರ್ಹೆಚ್ ತಂಡವು ಇದುವರೆಗೆ 12 ಪಂದ್ಯಗಳನ್ನಾಡಿದ್ದು, ಈ ವೇಳೆ 7 ಮ್ಯಾಚ್ಗಳಲ್ಲಿ ಗೆಲುವು ಸಾಧಿಸಿದೆ. ಇನ್ನು 2 ಪಂದ್ಯಗಳನ್ನು ಹೊಂದಿರುವ ಸನ್ರೈಸರ್ಸ್ ಹೈದರಾಬಾದ್ ತಂಡವು ಎಲ್ಲಾ ಮ್ಯಾಚ್ಗಳಲ್ಲಿ ಜಯ ಸಾಧಿಸಿದರೆ ಅಧಿಕೃತವಾಗಿ ಪ್ಲೇಆಫ್ಗೆ ಎಂಟ್ರಿ ಕೊಡಲಿದೆ. ಒಂದು ವೇಳೆ ಒಂದು ಮ್ಯಾಚ್ ಮಾತ್ರ ಗೆದ್ದರೆ ನೆಟ್ ರನ್ ರೇಟ್ ನೆರವಿನೊಂದಿಗೆ ಪ್ಲೇಆಫ್ಗೆ ಅರ್ಹತೆ ಗಿಟ್ಟಿಸಿಕೊಳ್ಳಲಿದೆ.
6 / 11
6- ಲಕ್ನೋ ಸೂಪರ್ ಜೈಂಟ್ಸ್: 12 ಮ್ಯಾಚ್ಗಳಲ್ಲಿ 6 ಗೆಲುವು ದಾಖಲಿಸಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡವು ಒಟ್ಟು 12 ಅಂಕಗಳನ್ನು ಹೊಂದಿದೆ. ಇನ್ನುಳಿದಿರುವ 2 ಮ್ಯಾಚ್ಗಳಲ್ಲಿ ಜಯ ಸಾಧಿಸಿದರೆ ಮಾತ್ರ ಪ್ಲೇಆಫ್ಗೆ ಅರ್ಹತೆ ಪಡೆಯಬಹುದು. ಆದರೆ ಇಲ್ಲಿ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಅಲಂಕರಿಸುವ ತಂಡ 16 ಪಾಯಿಂಟ್ಸ್ಗಳನ್ನು ಕಲೆಹಾಕಿದರೆ ಮಾತ್ರ ಎಲ್ಎಸ್ಜಿ ನೆಟ್ ರನ್ ರೇಟ್ ಸಹಾಯದಿಂದ ಪ್ಲೇಆಫ್ ಪ್ರವೇಶಿಸಬಹುದು.
7 / 11
5- ಡೆಲ್ಲಿ ಕ್ಯಾಪಿಟಲ್ಸ್: 12 ಪಂದ್ಯಗಳಲ್ಲಿ 6 ಜಯ ಸಾಧಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವು 12 ಪಾಯಿಂಟ್ಸ್ನೊಂದಿಗೆ ಅಂಕ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಇನ್ನುಳಿದಿರುವ 2 ಪಂದ್ಯಗಳಲ್ಲಿ ಜಯ ಸಾಧಿಸಿದರೆ ಮಾತ್ರ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಪ್ಲೇಆಫ್ ಪ್ರವೇಶಿಸಲು ಅವಕಾಶ ಇರಲಿದೆ. ಅಂದರೆ ಲೀಗ್ ಪಂದ್ಯಗಳ ಮುಕ್ತಾಯದ ವೇಳೆಗೆ ಪಾಯಿಂಟ್ಸ್ ಟೇಬಲ್ನ ಅಗ್ರ-4 ತಂಡಗಳಲ್ಲಿ ಒಂದು ಟೀಮ್ 16 ಅಂಕಗಳನ್ನು ಕಲೆಹಾಕಿದರೆ ಮಾತ್ರ ನೆಟ್ ರನ್ ರೇಟ್ನೊಂದಿಗೆ ಪ್ಲೇಆಫ್ ಪ್ರವೇಶಿಸುವ ಅವಕಾಶ ಡೆಲ್ಲಿ ಕ್ಯಾಪಿಟಲ್ಸ್ಗೆ ಲಭಿಸಲಿದೆ.
8 / 11
7- ರಾಯಲ್ ಚಾಲೆಂಜರ್ಸ್ ಬೆಂಗಳೂರು: ಆರ್ಸಿಬಿ ತಂಡವು ಈವರೆಗೆ 12 ಪಂದ್ಯಗಳನ್ನಾಡಿದ್ದು, ಈ ವೇಳೆ 5 ಜಯ ಸಾಧಿಸಿ ಒಟ್ಟು 10 ಅಂಕಗಳನ್ನು ಕಲೆಹಾಕಿದೆ. ಇದೀಗ ಅಂಕ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿರುವ ಆರ್ಸಿಬಿ ತಂಡವು ಪ್ಲೇಆಫ್ ಪ್ರವೇಶಿಸಬೇಕಿದ್ದರೆ ಉಳಿದ ತಂಡಗಳ ಫಲಿತಾಂಶವನ್ನು ಎದುರು ನೋಡಬೇಕು. ಅಂದರೆ ಮುಂದಿನ 2 ಪಂದ್ಯಗಳಲ್ಲೂ ಆರ್ಸಿಬಿ ಜಯ ಸಾಧಿಸಬೇಕು. ಅಲ್ಲದೆ ಅಂಕ ಪಟ್ಟಿಯಲ್ಲಿ 4ನೇ ಸ್ಥಾನ ಅಲಂಕರಿಸುವ ಟೀಮ್ 14 ಅಂಕಗಳನ್ಹು ಹೊಂದಿದ್ದರೆ ಮಾತ್ರ ಉತ್ತಮ ನೆಟ್ ರನ್ ರೇಟ್ನೊಂದಿಗೆ ಆರ್ಸಿಬಿಗೆ ಪ್ಲೇಆಫ್ ಪ್ರವೇಶಿಸಲು ಅವಕಾಶ ಇರಲಿದೆ.
9 / 11
10- ಪಂಜಾಬ್ ಕಿಂಗ್ಸ್ (E): 12 ಪಂದ್ಯಗಳಲ್ಲಿ 4 ಜಯ ಸಾಧಿಸಿರುವ ಪಂಜಾಬ್ ಕಿಂಗ್ಸ್ ತಂಡವು 8 ಪಾಯಿಂಟ್ಸ್ನೊಂದಿಗೆ ಅಂಕ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಇನ್ನುಳಿದಿರುವುದು ಕೇವಲ 2 ಮ್ಯಾಚ್ ಮಾತ್ರ. ಈ ಪಂದ್ಯಗಳಲ್ಲಿ ಗೆದ್ದರೂ ಪಂಜಾಬ್ ಕಿಂಗ್ಸ್ಗೆ ಪ್ಲೇಆಫ್ ಪ್ರವೇಶಿಸಲು ಅವಕಾಶವಿಲ್ಲ. ಅದರಂತೆ ಇದೀಗ ಪಂಜಾಬ್ ಕಿಂಗ್ಸ್ ಕೂಡ ಐಪಿಎಲ್ 2024 ರಿಂದ ಎಲಿಮಿನೇಟ್ ಆಗಿದೆ.
10 / 11
8- ಗುಜರಾತ್ ಟೈಟಾನ್ಸ್: 12 ಮ್ಯಾಚ್ಗಳಲ್ಲಿ 5 ಗೆಲುವು, 7 ಸೋಲುಗಳೊಂದಿಗೆ 8ನೇ ಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ ಪ್ಲೇಆಫ್ ಪ್ರವೇಶಿಸಬೇಕಿದ್ದರೆ ಮುಂದಿನ ಎಲ್ಲಾ ಪಂದ್ಯಗಳನ್ನು ಉತ್ತಮ ನೆಟ್ ರನ್ ರೇಟ್ನೊಂದಿಗೆ ಗೆಲ್ಲಬೇಕು. ಅಲ್ಲದೆ ಅಂಕ ಪಟ್ಟಿಯಲ್ಲಿ 4ನೇ ಸ್ಥಾನ ಅಲಂಕರಿಸುವ ಟೀಮ್ 14 ಅಂಕಗಳನ್ನು ಹೊಂದಿದ್ದರೆ ಮಾತ್ರ ನೆಟ್ ರನ್ ರೇಟ್ ನೆರವಿನಿಂದ ಪ್ಲೇಆಫ್ ಪ್ರವೇಶಿಸಲು ಅವಕಾಶ ಇರಲಿದೆ.
11 / 11
9- ಮುಂಬೈ ಇಂಡಿಯನ್ಸ್ (E): ಸತತ ಸೋಲುಗಳಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ 13 ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ 4 ಮ್ಯಾಚ್ ಮಾತ್ರ. ಇನ್ನುಳಿದಿರುವುದು ಕೇವಲ ಒಂದು ಪಂದ್ಯ. ಇದಕ್ಕೂ ಮುನ್ನವೇ ಮುಂಬೈ ಇಂಡಿಯನ್ಸ್ ಐಪಿಎಲ್ 2024 ರಿಂದ ಎಲಿಮಿನೇಟ್ ಆಗಿದೆ.
Published On - 12:31 pm, Mon, 6 May 24