
ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) 56ನೇ ಪಂದ್ಯದಲ್ಲಿ ಸ್ಪೋಟಕ ಅರ್ಧಶತಕ ಸಿಡಿಸಿ ಜೇಕ್ ಫ್ರೇಸರ್ ಮೆಕ್ಗುರ್ಕ್ (Jake Fraser-McGurk) ಐಪಿಎಲ್ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ಜೇಕ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು.

ಮೊದಲ ಓವರ್ನಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿದ ಜೇಕ್ ಫ್ರೇಸರ್ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಹಾಫ್ ಸೆಂಚುರಿಯೊಂದಿಗೆ ಐಪಿಎಲ್ನಲ್ಲಿ ಅತೀ ಕಡಿಮೆ ಎಸೆತಗಳಲ್ಲಿ ಅತ್ಯಧಿಕ ಬಾರಿ ಅರ್ಧಶತಕಗಳನ್ನು ಸಿಡಿಸಿದ ವಿಶೇಷ ದಾಖಲೆಯೊಂದು ಜೇಕ್ ಫ್ರೇಸರ್ ಪಾಲಾಯಿತು.

ಅಂದರೆ ಐಪಿಎಲ್ ಇತಿಹಾಸದಲ್ಲಿ 20 ಕ್ಕಿಂತ ಕಡಿಮೆ ಎಸೆತಗಳಲ್ಲಿ ಅತೀ ಹೆಚ್ಚು ಬಾರಿ ಅರ್ಧಶತಕ ಸಿಡಿಸಿದ ದಾಖಲೆ ಇದೀಗ ಜೇಕ್ ಫ್ರೇಸರ್ ಹೆಸರಿಗೆ ಸೇರ್ಪಡೆಯಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಯಶಸ್ವಿ ಜೈಸ್ವಾಲ್, ನಿಕೋಲಸ್ ಪೂರನ್, ಇಶಾನ್ ಕಿಶನ್, ಕೀರನ್ ಪೊಲಾರ್ಡ್, ಟ್ರಾವಿಸ್ ಹೆಡ್ ಹಾಗೂ ಕೆಎಲ್ ರಾಹುಲ್ ಹೆಸರಿನಲ್ಲಿತ್ತು. ಇವರೆಲ್ಲರೂ 20 ಕ್ಕಿಂತ ಕಡಿಮೆ ಎಸೆತಗಳಲ್ಲಿ 2 ಬಾರಿ ಅರ್ಧಶತಕ ಸಿಡಿಸಿದ್ದರು.

ಆದರೆ ಜೇಕ್ ಫ್ರೇಸರ್ ಈ ಬಾರಿಯ ಐಪಿಎಲ್ನಲ್ಲೇ ಮೂರು ಬಾರಿ ಸ್ಪೋಟಕ ಅರ್ಧಶತಕ ಸಿಡಿಸಿದ್ದಾರೆ. ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 15 ಎಸೆತಗಳಲ್ಲಿ ಹಾಫ್ ಸೆಂಚುರಿ ಬಾರಿಸಿ ದಾಖಲೆ ಬರೆದಿದ್ದ ಜೇಕ್, ಆ ಬಳಿಕ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲೂ 15 ಎಸೆತಗಳಲ್ಲೇ ಅರ್ಧಶತಕ ಪೂರೈಸಿದ್ದರು.

ಇದೀಗ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಬಾರಿ 20 ಕ್ಕಿಂತ ಕಡಿಮೆ ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.