IPL 2024: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-17 ರ ಮೊದಲ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್ ತಂಡ ಮುಗ್ಗರಿಸಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮುಂಬೈ ತಂಡವನ್ನು 6 ರನ್ಗಳಿಂದ ಮಣಿಸಿ ಗುಜರಾತ್ ಟೈಟಾನ್ಸ್ ತಂಡ ಶುಭಾರಂಭ ಮಾಡಿದೆ. ಈ ಸೋಲಿನ ಬೆನ್ನಲ್ಲೇ ಇದೀಗ ಹಾರ್ದಿಕ್ ಪಾಂಡ್ಯರ (Hardik Pandya) ನಾಯಕತ್ವದ ಬಗ್ಗೆ ಪ್ರಶ್ನೆಗಳೆದಿವೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲ ಓವರ್ ಎಸೆಯುವ ಮೂಲಕ ಪಾಂಡ್ಯ ಎಲ್ಲರ ಗಮನ ಸೆಳೆದರು. ಸಾಮಾನ್ಯವಾಗಿ ಮುಂಬೈ ಇಂಡಿಯನ್ಸ್ ಪರ ಜಸ್ಪ್ರೀತ್ ಬುಮ್ರಾ ಪ್ರಥಮ ಓವರ್ ಎಸೆಯುವುದು ವಾಡಿಕೆ. ಇದಾಗ್ಯೂ ಮೊದಲ ಮೂರು ಓವರ್ಗಳ ತನಕ ಕ್ಯಾಪ್ಟನ್ ಪಾಂಡ್ಯ, ಬುಮ್ರಾಗೆ ಚೆಂಡು ನೀಡಿರಲಿಲ್ಲ.
ಇನ್ನು ನಾಲ್ಕನೇ ಓವರ್ನಲ್ಲಿ ದಾಳಿಗಿಳಿದ ಜಸ್ಪ್ರೀತ್ ಆರಂಭಿಕ ಬ್ಯಾಟರ್ ಬುಮ್ರಾ ವೃದ್ಧಿಮಾನ್ ಸಾಹ (19) ಅವರನ್ನು ಕ್ಲೀನ್ ಬೌಲ್ಡ್ ಮಾಡಿ, ಮುಂಬೈ ಇಂಡಿಯನ್ಸ್ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಈ ಯಶಸ್ಸಿನ ಬಳಿಕ ಬುಮ್ರಾಗೆ ಮತ್ತೆ ಓವರ್ ನೀಡಿರಲಿಲ್ಲ ಎಂಬುದೇ ಅಚ್ಚರಿ.
ಅಲ್ಲದೆ 4ನೇ ಓವರ್ ಮುಗಿಸಿದ ಬಳಿಕ ಮತ್ತೆ ಜಸ್ಪ್ರೀತ್ ಬುಮ್ರಾ ಅವರನ್ನು ದಾಳಿಗಿಳಿಸಿದ್ದು 13ನೇ ಓವರ್ನಲ್ಲಿ. ಅಂದರೆ ಇಲ್ಲಿ ಪವರ್ಪ್ಲೇನಲ್ಲಿ ಯಾರ್ಕರ್ ಸ್ಪೆಷಲಿಸ್ಟ್ ಅನ್ನು ಬಳಸಿಕೊಳ್ಳಲು ಪಾಂಡ್ಯ ಮನಸ್ಸು ಮಾಡಲಿಲ್ಲ. ಇದರ ನಡುವೆ ಗುಜರಾತ್ ಟೈಟಾನ್ಸ್ ತಂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು.
ಇನ್ನು 17ನೇ ಓವರ್ನಲ್ಲಿ ಕರಾರುವಾಕ್ ದಾಳಿ ಸಂಘಟಿಸಿದ ಜಸ್ಪ್ರೀತ್ ಬುಮ್ರಾ ಡೇಂಜರಸ್ ಡೇವಿಡ್ ಮಿಲ್ಲರ್ (12) ವಿಕೆಟ್ ಪಡೆದರು. ಇದೇ ಓವರ್ನಲ್ಲೇ ಸಾಯಿ ಸುದರ್ಶನ್ (45) ಅವರನ್ನು ಸಹ ಔಟ್ ಮಾಡಿದರು. ಈ ಮೂಲಕ 4 ಓವರ್ಗಳಲ್ಲಿ ಕೇವಲ 14 ರನ್ ನೀಡಿ 3 ವಿಕೆಟ್ ಕಬಳಿಸಿ ಮಿಂಚಿದರು.
ಇಲ್ಲಿ ಗುಜರಾತ್ ಟೈಟಾನ್ಸ್ ತಂಡವು ಪವರ್ಪ್ಲೇನಲ್ಲಿ 47 ರನ್ ಬಾರಿಸಿದರೆ, ಆ ಬಳಿಕ 12 ಓವರ್ ಆಗುವಷ್ಟರಲ್ಲಿ 100 ರನ್ಗಳ ಗಡಿದಾಟಿದ್ದರು. ಇದಾದ ಬಳಿಕವಷ್ಟೇ ಜಸ್ಪ್ರೀತ್ ಬುಮ್ರಾ ಮತ್ತೆ ದಾಳಿಗಿಳಿದಿರುವುದು ಎಂಬುದು ಉಲ್ಲೇಖಾರ್ಹ. ಆ ಬಳಿಕ ವಿಕೆಟ್ ಕಳೆದುಕೊಂಡಿದ್ದಲ್ಲದೇ 8 ಓವರ್ಗಳಲ್ಲಿ ಗಳಿಸಿದ್ದು ಕೇವಲ 64 ರನ್ಗಳು ಮಾತ್ರ.
ಅಂದರೆ ಗುಜರಾತ್ ಟೈಟಾನ್ಸ್ ತಂಡವು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿರುವುದು ಮೊದಲ 12 ಓವರ್ಗಳಲ್ಲಿ ಎಂಬುದು ಸ್ಪಷ್ಟ. ಈ ವೇಳೆ ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾರನ್ನು ಬೌಲಿಂಗ್ನಿಂದ ದೂರವಿಟ್ಟಿದ್ದ ನಾಯಕ ಹಾರ್ದಿಕ್ ಪಾಂಡ್ಯ ಅವರ ನಾಯಕತ್ವದ ಬಗ್ಗೆ ಇದೀಗ ಚರ್ಚೆಗಳು ಶುರುವಾಗಿದೆ.