ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ರ 31ನೇ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಜೋಸ್ ಬಟ್ಲರ್ (Jos Buttler) ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ರೋಚಕ ಜಯ ತಂದುಕೊಟ್ಟಿದ್ದಾರೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡವು ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 223 ರನ್ ಕಲೆಹಾಕಿತು.
ಈ ಬೃಹತ್ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕ ಆಟಗಾರ ಜೋಸ್ ಬಟ್ಲರ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಏಕಾಂಗಿಯಾಗಿ ದಿಟ್ಟ ಹೋರಾಟ ಪ್ರದರ್ಶಿಸಿದ ಬಟ್ಲರ್ 60 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್, 9 ಫೋರ್ಗಳೊಂದಿಗೆ ಅಜೇಯ 107 ರನ್ ಬಾರಿಸಿದರು. ಈ ಮೂಲಕ 20ನೇ ಓವರ್ನ ಕೊನೆಯ ಎಸೆತದಲ್ಲಿ 1 ರನ್ ಕಲೆಹಾಕಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 2 ವಿಕೆಟ್ಗಳ ರೋಚಕ ಜಯ ತಂದುಕೊಟ್ಟರು.
ಈ ಭರ್ಜರಿ ಸೆಂಚುರಿಯೊಂದಿಗೆ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಶತಕ ಸಿಡಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಜೋಸ್ ಬಟ್ಲರ್ ದ್ವಿತೀಯ ಸ್ಥಾನಕ್ಕೇರಿದರು. ಅದು ಕೂಡ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಅವರ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅತೀ ಹೆಚ್ಚು ಶತಕ ಸಿಡಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಈ ಹಿಂದೆ ಕ್ರಿಸ್ ಗೇಲ್ ದ್ವಿತೀಯ ಸ್ಥಾನದಲ್ಲಿದ್ದರು. 141 ಐಪಿಎಲ್ ಇನಿಂಗ್ಸ್ಗಳಲ್ಲಿ ಗೇಲ್ ಒಟ್ಟು 6 ಶತಕಗಳನ್ನು ಬಾರಿಸಿ ಈ ದಾಖಲೆ ನಿರ್ಮಿಸಿದ್ದರು. ಇದೀಗ ಈ ದಾಖಲೆಯನ್ನು ಬಟ್ಲರ್ ಮುರಿದಿದ್ದಾರೆ.
ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಸೆಂಚುರಿ ಸಿಡಿಸುವ ಮೂಲಕ ಜೋಸ್ ಬಟ್ಲರ್ 7ನೇ ಶತಕದ ಸಾಧನೆ ಮಾಡಿದ್ದಾರೆ. ಈ ಮೂಲಕ ಐಪಿಎಲ್ನಲ್ಲಿ ಅತೀ ಹೆಚ್ಚು ಶತಕ ಬಾರಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಬಟ್ಲರ್ ದ್ವಿತೀಯ ಸ್ಥಾನಕ್ಕೇರಿದ್ದಾರೆ.
ಇನ್ನು ಐಪಿಎಲ್ ಶತಕವೀರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ವಿರಾಟ್ ಕೊಹ್ಲಿ. ಕಿಂಗ್ ಕೊಹ್ಲಿ 236 ಇನಿಂಗ್ಸ್ಗಳಲ್ಲಿ ಒಟ್ಟು 8 ಶತಕಗಳನ್ನು ಬಾರಿಸಿ ಈ ದಾಖಲೆ ಬರೆದಿದ್ದಾರೆ.
ಇದೀಗ ಕೇವಲ 101 ಇನಿಂಗ್ಸ್ಗಳಲ್ಲಿ 7 ಶತಕ ಸಿಡಿಸಿರುವ ಜೋಸ್ ಬಟ್ಲರ್ ಮುಂಬರುವ ಪಂದ್ಯಗಳಲ್ಲಿ 2 ಸೆಂಚುರಿಗಳನ್ನು ಬಾರಿಸಿದರೆ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಬಹುದು. ಹೀಗಾಗಿ ಶತಕದ ವಿಷಯದಲ್ಲಿ ಕಿಂಗ್ ಕೊಹ್ಲಿ ಹಾಗೂ ಜೋಸ್ ದಿ ಬಾಸ್ ನಡುವೆ ಪೈಪೋಟಿಯನ್ನು ನಿರೀಕ್ಷಿಸಬಹುದು.