IPL 2024: ಐಪಿಎಲ್ನಲ್ಲಿರುವ ಕರ್ನಾಟಕದ 11 ಆಟಗಾರರ ಪಟ್ಟಿ ಇಲ್ಲಿದೆ
TV9 Web | Updated By: ಝಾಹಿರ್ ಯೂಸುಫ್
Updated on:
Mar 16, 2024 | 1:24 PM
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಸೀಸನ್ 17 ಮಾರ್ಚ್ 22 ರಿಂದ ಶುರುವಾಗಲಿದೆ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕರ್ನಾಟಕದ ಒಟ್ಟು 11 ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. ಇವರಲ್ಲಿ ಇಬ್ಬರು ಆಟಗಾರರು ಮಾತ್ರ ಆರ್ಸಿಬಿ ತಂಡದಲ್ಲಿದ್ದಾರೆ. ಹಾಗೆಯೇ ಮುಂಬೈ ಇಂಡಿಯನ್ಸ್, ಕೆಕೆಆರ್ ತಂಡಗಳಲ್ಲೂ ಕನ್ನಡಿಗರು ಸ್ಥಾನ ಪಡೆದಿದ್ದಾರೆ.
1 / 13
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಆರಂಭಕ್ಕೆ ದಿನಗಣನೆ ಶುರುವಾಗಿದೆ. ಮಾರ್ಚ್ 22 ರಿಂದ ಆರಂಭವಾಗಲಿರುವ 17ನೇ ಆವೃತ್ತಿಯ ಐಪಿಎಲ್ನ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಗಳು ಕಣಕ್ಕಿಳಿಯಲಿದೆ.
2 / 13
ಇನ್ನು ಈ ಬಾರಿ ಕಣಕ್ಕಿಳಿಯುವ 10 ತಂಡಗಳಲ್ಲಿ ಒಟ್ಟು 11 ಕರ್ನಾಟಕದ ಆಟಗಾರರು ಸ್ಥಾನ ಪಡೆದಿದ್ದಾರೆ. ಇವರಲ್ಲಿ ಇಬ್ಬರು ಆರ್ಸಿಬಿ ತಂಡದಲ್ಲಿದ್ದರೆ, ಮೂವರು ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿದ್ದಾರೆ. ಹಾಗಿದ್ರೆ ಈ ಬಾರಿಯ ಐಪಿಎಲ್ನಲ್ಲಿರುವ ಕನ್ನಡಿಗರು ಯಾರೆಲ್ಲಾ ಎಂದು ನೋಡೋಣ...
3 / 13
1- ಕೆಎಲ್ ರಾಹುಲ್: ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕನಾಗಿ ಈ ಬಾರಿ ಕೂಡ ಕೆಎಲ್ ರಾಹುಲ್ ಕಾಣಿಸಿಕೊಳ್ಳಲಿದ್ದಾರೆ. ಇದರ ಜೊತೆ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ನಿರ್ವಹಿಸುವ ಸಾಧ್ಯತೆಯಿದೆ.
4 / 13
2- ಮಯಾಂಕ್ ಅಗರ್ವಾಲ್: ಸನ್ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕನಾಗಿ ಮಯಾಂಕ್ ಅಗರ್ವಾಲ್ ಕಣಕ್ಕಿಳಿಯುವ ಸಾಧ್ಯತೆಯಿದೆ. ಕಳೆದ ಸೀಸನ್ನಲ್ಲಿ ಕೆಲ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದ ಮಯಾಂಕ್ ಈ ಬಾರಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.
5 / 13
3- ಅಭಿನವ್ ಮನೋಹರ್: ಕಳೆದೆರಡು ಸೀಸನ್ಗಳಿಂದ ಗುಜರಾತ್ ಟೈಟಾನ್ಸ್ ತಂಡದ ಭಾಗವಾಗಿರುವ ಕರ್ನಾಟಕದ ಸ್ಪೋಟಕ ಬ್ಯಾಟರ್ ಅಭಿನವ್ ಮನೋಹರ್ ಈ ಬಾರಿ ಕೂಡ GT ಪರ ಕಣಕ್ಕಿಳಿಯಲಿದ್ದಾರೆ.
6 / 13
4- ವಿಧ್ವತ್ ಕಾವೇರಪ್ಪ: ಕೊಡಗಿನ ಕುವರ, ಕರ್ನಾಟಕದ ಯುವ ವೇಗಿ ವಿಧ್ವತ್ ಕಾವೇರಪ್ಪ ಅವರನ್ನು ಕಳೆದ ಸೀಸನ್ನಲ್ಲಿ ಪಂಜಾಬ್ ಕಿಂಗ್ಸ್ ಖರೀದಿಸಿತ್ತು. ಇದಾಗ್ಯೂ ಯುವ ಬೌಲರ್ಗೆ ಪಾದಾರ್ಪಣೆ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಇದೀಗ ಪಂಜಾಬ್ ಕಿಂಗ್ಸ್ ತಂಡದಲ್ಲಿರುವ ಕಾವೇರಪ್ಪ ಚೊಚ್ಚಲ ಪಂದ್ಯವಾಡುವ ಅವಕಾಶವನ್ನು ಎದುರು ನೋಡುತ್ತಿದ್ದಾರೆ.
7 / 13
5- ಪ್ರವೀಣ್ ದುಬೆ: ಕರ್ನಾಟಕದ ಸ್ಪಿನ್ನರ್ ಪ್ರವೀಣ್ ದುಬೆ ಕಳೆದ ಕೆಲ ಸೀಸನ್ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿದ್ದಾರೆ. ಆದರೆ ಅವರಿಗೆ ಸತತ ಅವಕಾಶ ಸಿಕ್ಕಿಲ್ಲ. ಇದಾಗ್ಯೂ ಈ ಬಾರಿ ಸಂಪೂರ್ಣ ಟೂರ್ನಿ ಆಡುವ ವಿಶ್ವಾಸದಲ್ಲಿದ್ದಾರೆ.
8 / 13
5- ದೇವದತ್ ಪಡಿಕ್ಕಲ್: ಐಪಿಎಲ್ 2023 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ದೇವದತ್ ಪಡಿಕ್ಕಲ್ ಅವರನ್ನು ಈ ಬಾರಿಯ ಹರಾಜಿಗೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ ಟ್ರೇಡ್ ಮಾಡಿಕೊಂಡಿದೆ. ಅದರಂತೆ ಈ ಬಾರಿ ಪಡಿಕ್ಕಲ್, ಕೆಎಲ್ ರಾಹುಲ್ ನಾಯಕತ್ವದಲ್ಲಿ ಆಡಲಿದ್ದಾರೆ.
9 / 13
7- ವೈಶಾಕ್ ವಿಜಯ್ ಕುಮಾರ್: ಕರ್ನಾಟಕ ವೇಗಿ ವೈಶಾಕ್ ವಿಜಯ್ ಕುಮಾರ್ ಆರ್ಸಿಬಿ 7 ಪಂದ್ಯಗಳನ್ನಾಡಿದ್ದು, ಈ ವೇಳೆ ಒಟ್ಟು 9 ವಿಕೆಟ್ ಕಬಳಿಸಿದ್ದಾರೆ. ಅಲ್ಲದೆ ಈ ಬಾರಿ ಕೂಡ ಆರ್ಸಿಬಿ ಪರ ಕಣಕ್ಕಿಳಿಯುವ ಮೂಲಕ ಕಮಾಲ್ ಮಾಡುವ ವಿಶ್ವಾಸದಲ್ಲಿದ್ದಾರೆ.
10 / 13
8- ಕೃಷ್ಣಪ್ಪ ಗೌತಮ್: ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಆಲ್ರೌಂಡರ್ ಆಗಿ ಕೃಷ್ಣಪ್ಪ ಗೌತಮ್ ಕಾಣಿಸಿಕೊಳ್ಳಲಿದ್ದಾರೆ. ಕಳೆದ ಸೀಸನ್ನಲ್ಲೂ ಎಲ್ಎಸ್ಜಿ ಪರ ಆಡಿದ್ದ ಗೌತಮ್ ಈ ಬಾರಿ ಕೆಎಲ್ ರಾಹುಲ್ ಗರಡಿಯಲ್ಲಿ ಸ್ಪಿನ್ ಮೋಡಿ ಮಾಡುವ ನಿರೀಕ್ಷೆಯಲ್ಲಿದ್ದಾರೆ.
11 / 13
9- ಮನೋಜ್ ಭಾಂಡಗೆ: ಐಪಿಎಲ್ 2023 ರಲ್ಲಿ ಆರ್ಸಿಬಿ ತಂಡಕ್ಕೆ ಆಯ್ಕೆಯಾಗಿದ್ದ ಮನೋಜ್ ಭಾಂಡಗೆಗೆ ಕಳೆದ ಸೀಸನ್ನಲ್ಲಿ ಒಂದೇ ಒಂದು ಪಂದ್ಯವಾಡಲು ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ಈ ಬಾರಿ ಆರ್ಸಿಬಿ ಪರ ಪಾದಾರ್ಪಣೆ ಮಾಡುವ ಅವಕಾಶವನ್ನು ಎದುರು ನೋಡುತ್ತಿದ್ದಾರೆ.
12 / 13
10- ಶ್ರೇಯಸ್ ಗೋಪಾಲ್: ಈ ಬಾರಿಯ ಐಪಿಎಲ್ನಲ್ಲಿ ಕೇವಲ 20 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಕರ್ನಾಟಕದ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಅವರನ್ನು ಬೇಸ್ ಪ್ರೈಸ್ಗೆ ಮುಂಬೈ ಇಂಡಿಯನ್ಸ್ ಖರೀದಿಸಿದೆ. ಅದರಂತೆ ಶ್ರೇಯಸ್ ಗೋಪಾಲ್ ಮುಂಬೈ ಪರ ಕಣಕ್ಕಿಳಿಯಲಿದ್ದಾರೆ.
13 / 13
11- ಮನೀಶ್ ಪಾಂಡೆ: ಈ ಬಾರಿಯ ಐಪಿಎಲ್ ಹರಾಜಿನ ಮೊದಲ ಸೆಟ್ನಲ್ಲೇ ಕಾಣಿಸಿಕೊಂಡಿದ್ದ ಮನೀಶ್ ಪಾಂಡೆ ಅವರನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 50 ಲಕ್ಷ ರೂ. ಮೂಲ ಬೆಲೆಗೆ ಖರೀದಿಸಿದೆ. ಅದರಂತೆ ಪಾಂಡೆ ಮತ್ತೊಮ್ಮೆ ಕೆಕೆಆರ್ ಪರ ಕಣಕ್ಕಿಳಿಯಲಿದ್ದಾರೆ.