IPL 2024: ಅತೀ ವೇಗದಲ್ಲಿ ಚೆಂಡೆಸೆದು ದಾಖಲೆ ಬರೆದ ಮಯಾಂಕ್
TV9 Web | Updated By: ಝಾಹಿರ್ ಯೂಸುಫ್
Updated on:
Mar 31, 2024 | 6:34 AM
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2024) 11ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಭರ್ಜರಿ ಜಯ ಸಾಧಿಸಿದೆ. ಏಕಾನ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 199 ರನ್ ಕಲೆಹಾಕಿತು. 200 ರನ್ಗಳ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡವು 178 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್ 21 ರನ್ಗಳ ಜಯ ಸಾಧಿಸಿತು.
1 / 7
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ರಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ಈ ದಾಖಲೆ ನಿರ್ಮಿಸಿರುವುದು 21 ವರ್ಷದ ಯುವ ವೇಗಿ ಮಯಾಂಕ್ ಯಾದವ್ (Mayank Yadav). ಲಕ್ನೋ ಸೂಪರ್ ಜೈಂಟ್ಸ್ ಪರ ಪಾದಾರ್ಪಣೆ ಮಾಡಿರುವ ಮಾಯಾಂಕ್ ಚೊಚ್ಚಲ ಪಂದ್ಯದಲ್ಲೇ ಅತೀ ವೇಗದಲ್ಲಿ ಚೆಂಡೆಸೆದು ಐಪಿಎಲ್ 2024 ರಲ್ಲಿ ದಾಖಲೆ ಬರೆದಿದ್ದಾರೆ.
2 / 7
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದ ಮಯಾಂಕ್ ಯಾದವ್ ಭರ್ಜರಿ ಬೌಲಿಂಗ್ ಪ್ರದರ್ಶಿಸಿದ್ದರು. 149 kmph ವೇಗದೊಂದಿಗೆ ಐಪಿಎಲ್ ಕೆರಿಯರ್ ಆರಂಭಿಸಿದ ಯುವ ವೇಗಿಯನ್ನು ಎದುರಿಸಲು ಪಂಜಾಬ್ ಕಿಂಗ್ಸ್ ತಂಡದ ಅನುಭವಿ ಬ್ಯಾಟರ್ಗಳು ತಿಣುಕಾಡಿದರು.
3 / 7
ಅದರಲ್ಲೂ ಮಯಾಂಕ್ ಯಾದವ್ ಎಸೆದ 12ನೇ ಓವರ್ನ ಮೊದಲ ಎಸೆತವು ಶಿಖರ್ ಧವನ್ ಕಣ್ಣು ಮಿಟುಕುವಷ್ಟರಲ್ಲಿ ವಿಕೆಟ್ ಕೀಪರ್ ಕೈ ಸೇರಿತ್ತು. ಈ ಎಸೆತವು ಬರೋಬ್ಬರಿ 155.8 kmph ಸ್ಪೀಡ್ ಹೊಂದಿತ್ತು ಎಂಬುದು ವಿಶೇಷ. ಇದರೊಂದಿಗೆ ಐಪಿಎಲ್ 2024 ರಲ್ಲಿ ಅತೀ ವೇಗದಲ್ಲಿ ಚೆಂಡೆಸೆದ ದಾಖಲೆ ಮಯಾಂಕ್ ಯಾದವ್ ಪಾಲಾಗಿದೆ.
4 / 7
ಇದಕ್ಕೂ ಮುನ್ನ ಈ ದಾಖಲೆ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ ಸೌತ್ ಆಫ್ರಿಕಾದ ವೇಗದ ಬೌಲರ್ ನಾಂಡ್ರೆ ಬರ್ಗರ್ ಹೆಸರಿನಲ್ಲಿತ್ತು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಬರ್ಗರ್ 153 kmph ವೇಗದಲ್ಲಿ ಚೆಂಡೆಸೆದು ಗಮನ ಸೆಳೆದಿದ್ದರು.
5 / 7
ಇದೀಗ 21 ರ ಹರೆಯದ ಮಯಾಂಕ್ ಯಾದವ್ ಸತತವಾಗಿ 145 ರಿಂದ 150 ಅಸುಪಾಸಿನಲ್ಲಿ ಚೆಂಡೆಸೆಯುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಅಷ್ಟೇ ಅಲ್ಲದೆ 155.8 kmph ವೇಗದಲ್ಲಿ ಬೆಂಕಿ ಎಸೆತದೊಂದಿಗೆ ಈ ಬಾರಿಯ ಐಪಿಎಲ್ನಲ್ಲಿ ಅತೀ ವೇಗದಲ್ಲಿ ಚೆಂಡೆಸೆದ ಬೌಲರ್ ಎನಿಸಿಕೊಂಡಿದ್ದಾರೆ.
6 / 7
ಇನ್ನು ಈ ಪಂದ್ಯದಲ್ಲಿ 4 ಓವರ್ಗಳನ್ನು ಬೌಲಿಂಗ್ ಮಾಡಿದ ಮಯಾಂಕ್ ಕೇವಲ 27 ರನ್ ನೀಡಿ 3 ವಿಕೆಟ್ ಕಬಳಿಸಿದರು. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನೂ ಸಹ ತಮ್ಮದಾಗಿಸಿಕೊಂಡರು.
7 / 7
ಅಂದಹಾಗೆ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗವಾಗಿ ಚೆಂಡೆಸೆದ ದಾಖಲೆ ಆಸ್ಟ್ರೇಲಿಯಾದ ಶಾನ್ ಟೈಟ್ ಹೆಸರಿನಲ್ಲಿದೆ. 2011 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ಟೈಟ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 157.71 Kmph ವೇಗದಲ್ಲಿ ಚೆಂಡೆಸೆದು ದಾಖಲೆ ನಿರ್ಮಿಸಿದ್ದಾರೆ. ಈ ದಾಖಲೆಯನ್ನು ಮಯಾಂಕ್ ಯಾದವ್ ಮುರಿಯಲಿದ್ದಾರಾ ಕಾದು ನೋಡಬೇಕಿದೆ.