
ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) 53ನೇ ಪಂದ್ಯದ ಮೂಲಕ ಮಹೇಂದ್ರ ಸಿಂಗ್ ಧೋನಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧದ ಈ ಪಂದ್ಯದಲ್ಲಿ ಒಂದು ಕ್ಯಾಚ್ ಹಿಡಿಯುವುದರೊಂದಿಗೆ ಧೋನಿ ಐಪಿಎಲ್ನಲ್ಲಿ ವಿಶೇಷ ಮೈಲುಗಲ್ಲನ್ನು ದಾಟಿದರು. ಆ ಮೈಲುಗಲ್ಲು ಯಾವುದು ಎಂಬುದು ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ...

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಜಿತೇಶ್ ಶರ್ಮಾ ಬಾರಿಸಿದ ಚೆಂಡು ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಕೈ ಸೇರಿತು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ 150 ಕ್ಯಾಚ್ಗಳನ್ನು ಹಿಡಿದ ಮೊದಲ ವಿಕೆಟ್ ಕೀಪರ್ ಎಂಬ ದಾಖಲೆ ಧೋನಿ ಪಾಲಾಗಿದೆ.

254 ಇನಿಂಗ್ಸ್ಗಳಲ್ಲಿ ವಿಕೆಟ್ ಕೀಪಿಂಗ್ ಮಾಡಿರುವ ಧೋನಿ ಈವರೆಗೆ 150 ಕ್ಯಾಚ್ಗಳನ್ನು ಹಿಡಿದಿದ್ದಾರೆ. ಹಾಗೆಯೇ 42 ಸ್ಟಂಪಿಂಗ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ವಿಕೆಟ್ ಹಿಂದೆ 192* ಬಲಿ ಪಡೆದ ಐಪಿಎಲ್ನ ಅತ್ಯಂತ ಯಶಸ್ವಿ ವಿಕೆಟ್ ಕೀಪರ್ ಎನಿಸಿಕೊಂಡಿದ್ದಾರೆ.

ಇನ್ನು ಈ ಪಟ್ಟಿಯಲ್ಲಿ ದಿನೇಶ್ ಕಾರ್ತಿಕ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಆರ್ಸಿಬಿ ಪರ ಕಣಕ್ಕಿಳಿಯುತ್ತಿರುವ ಡಿಕೆ ಈವರೆಗೆ 141 ಕ್ಯಾಚ್ಗಳನ್ನು ಹಿಡಿದಿದ್ದಾರೆ. ಹಾಗೆಯೇ 231 ಇನಿಂಗ್ಸ್ಗಳಲ್ಲಿ 177 ಬಲಿ ಪಡೆಯುವ ಮೂಲಕ ಐಪಿಎಲ್ನ 2ನೇ ಯಶಸ್ವಿ ವಿಕೆಟ್ ಕೀಪರ್ ಎನಿಸಿಕೊಂಡಿದ್ದಾರೆ.

ಒಟ್ಟಿನಲ್ಲಿ 42ನೇ ಹಿರಿ ವಯಸ್ಸಿನಲ್ಲಿ ವಿಕೆಟ್ ಹಿಂದೆ ಅದ್ಭುತ ಪ್ರದರ್ಶನ ನೀಡುವ ಮೂಲಕ ಮಹೇಂದ್ರ ಸಿಂಗ್ ಧೋನಿ ಐಪಿಎಲ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಭರ್ಜರಿ ದಾಖಲೆಯೊಂದಿಗೆ ಧೋನಿ ಈ ಬಾರಿಯ ಐಪಿಎಲ್ನೊಂದಿಗೆ ವಿದಾಯ ಹೇಳಲಿದ್ದಾರಾ ಕಾದು ನೋಡಬೇಕಿದೆ.