ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ರಲ್ಲಿ ಮಹೇಂದ್ರ ಸಿಂಗ್ ಧೋನಿಯ (MS Dhoni) ಅಬ್ಬರ ಮುಂದುವರೆದಿದೆ. ಏಕಾನ ಸ್ಟೇಡಿಯಂನಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 18ನೇ ಓವರ್ ವೇಳೆ ಕಣಕ್ಕಿಳಿದ ಧೋನಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು.
ಕೇವಲ 9 ಎಸೆತಗಳನ್ನು ಎದುರಿಸಿದ ಎಂಎಸ್ಡಿ 2 ಭರ್ಜರಿ ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ 28 ರನ್ ಬಾರಿಸಿದರು. ಇದಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ 4 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ಗಳೊಂದಿಗೆ 20 ರನ್ ಚಚ್ಚಿದ್ದರು. ಹೀಗೆ ಕೊನೆಯ ಓವರ್ನಲ್ಲಿ ಅಬ್ಬರಿಸುವ ಮೂಲಕ ಧೋನಿ ಇಡೀ ಪಂದ್ಯದ ಚಿತ್ರಣ ಬದಲಿಸುತ್ತಿದ್ದಾರೆ.
ಇನ್ನು 20ನೇ ಓವರ್ನಲ್ಲಿ ಧೋನಿ ಬ್ಯಾಟ್ನಿಂದ ಇದುವರೆಗೆ ಮೂಡಿಬಂದಿರುವ ಒಟ್ಟು ಸಿಕ್ಸ್ಗಳ ಸಂಖ್ಯೆ ಬರೋಬ್ಬರಿ 65. ಅಂದರೆ ಐಪಿಎಲ್ ಇತಿಹಾಸದಲ್ಲಿ ಧೋನಿಯನ್ನು ಹೊರತುಪಡಿಸಿ ಯಾವುದೇ ಬ್ಯಾಟರ್ 20ನೇ ಓವರ್ನಲ್ಲಿ ಬ್ಯಾಟ್ ಬೀಸಿ 50 ಕ್ಕಿಂತ ಅಧಿಕ ಸಿಕ್ಸ್ ಬಾರಿಸಿಲ್ಲ. ಆದರೆ ಎಂಎಸ್ಡಿ ಈಗಾಗಲೇ 65 ಸಿಕ್ಸ್ಗಳನ್ನು ಸಿಡಿಸಿ ದಾಖಲೆ ನಿರ್ಮಿಸಿದ್ದಾರೆ.
ಐಪಿಎಲ್ನಲ್ಲಿ ಧೋನಿ 20ನೇ ಓವರ್ನಲ್ಲಿ ಈವರೆಗೆ 313 ಎಸೆತಗಳನ್ನು ಎದುರಿಸಿದ್ದಾರೆ. ಈ ವೇಳೆ 53 ಫೋರ್ ಹಾಗೂ 65 ಸಿಕ್ಸ್ಗಳನ್ನು ಬಾರಿಸಿದ್ದಾರೆ. ಈ ಮೂಲಕ 246.64 ರ ಸ್ಟ್ರೈಕ್ ರೇಟ್ನಲ್ಲಿ ಬರೋಬ್ಬರಿ 772 ರನ್ ಕಲೆಹಾಕಿದ್ದಾರೆ.
ಹಾಗೆಯೇ ಈ ಬಾರಿಯ ಐಪಿಎಲ್ನಲ್ಲಿ ಧೋನಿ ಕೊನೆಯ ಓವರ್ನಲ್ಲಿ ಒಟ್ಟು 16 ಎಸೆತಗಳನ್ನು ಎದುರಿಸಿದ್ದಾರೆ. ಈ ವೇಳೆ 6 ಭರ್ಜರಿ ಸಿಕ್ಸ್ ಹಾಗೂ 4 ಫೋರ್ಗಳನ್ನು ಸಿಡಿಸಿದ್ದಾರೆ. ಅಲ್ಲದೆ 356.25 ಸ್ಟ್ರೈಕ್ ರೇಟ್ನಲ್ಲಿ 57 ರನ್ ಚಚ್ಚಿದ್ದಾರೆ. ಇದುವೇ ಮಹೇಂದ್ರ ಸಿಂಗ್ ಧೋನಿ ಗ್ರೇಟೆಸ್ಟ್ ಫಿನಿಶರ್ ಎಂಬುದಕ್ಕೆ ಸಾಕ್ಷಿ.