MS Dhoni: 3 ಭರ್ಜರಿ ದಾಖಲೆ ಬರೆದ ಧೋನಿ
TV9 Web | Updated By: ಝಾಹಿರ್ ಯೂಸುಫ್
Updated on:
Apr 01, 2024 | 6:32 AM
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2024) 13ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 191 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಸಿಎಸ್ಕೆ ತಂಡ 20 ಓವರ್ಗಳಲ್ಲಿ 171 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ರಿಷಭ್ ಪಂತ್ ಪಡೆ 20 ರನ್ಗಳ ಜಯ ಸಾಧಿಸಿದೆ.
1 / 6
ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) 13ನೇ ಪಂದ್ಯದ ಮೂಲಕ ವಿಂಟೇಜ್ ಧೋನಿಯ (MS Dhoni) ದರ್ಶನವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಈ ಪಂದ್ಯದಲ್ಲಿ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಧೋನಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.
2 / 6
ಅಂತಿಮ ಓವರ್ಗಳ ವೇಳೆ ಬಿರುಸಿನ ಬ್ಯಾಟಿಂಗ್ ನಡೆಸಿದ ಧೋನಿ 16 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ ಅಜೇಯ 37 ರನ್ ಬಾರಿಸಿದರು. ಈ ರನ್ಗಳೊಂದಿಗೆ ಧೋನಿ ಹಲವು ದಾಖಲೆಗಳನ್ನು ಸಹ ಬರೆದಿದ್ದಾರೆ. ಆ ದಾಖಲೆಗಳಾವುವು ಎಂದರೆ...
3 / 6
ಈ ಪಂದ್ಯದ ಕೊನೆಯ ಓವರ್ನಲ್ಲಿ 2 ಸಿಕ್ಸ್ ಸಿಡಿಸುವುದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಅಂತಿಮ ಓವರ್ನಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ಹೆಗ್ಗಳಿಕೆಗೆ ಪಾತ್ರರಾದರು. ಧೋನಿ ಕೊನೆಯ ಓವರ್ನಲ್ಲಿ ಎದುರಿಸಿದ ಒಟ್ಟು 303 ಎಸೆತಗಳಲ್ಲಿ 61 ಸಿಕ್ಸ್ಗಳನ್ನು ಸಿಡಿಸಿ ಈ ಸಾಧನೆ ಮಾಡಿದ್ದಾರೆ.
4 / 6
ಹಾಗೆಯೇ ಈ ಪಂದ್ಯದಲ್ಲಿ ಅಜೇಯ 37 ರನ್ ಬಾರಿಸುವುದರೊಂದಿಗೆ ಟಿ20 ಕ್ರಿಕೆಟ್ನಲ್ಲಿ 7 ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ ಏಷ್ಯಾದ ಮೊದಲ ವಿಕೆಟ್ ಕೀಪರ್ ಬ್ಯಾಟರ್ ಎನಿಸಿಕೊಂಡಿದ್ದಾರೆ. ಹಾಗೆಯೇ ವಿಶ್ವದ ಮೂರನೇ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ಕ್ವಿಂಟನ್ ಡಿ ಕಾಕ್ (8,578) ಮತ್ತು ಜೋಸ್ ಬಟ್ಲರ್ (7,721) ಮೊದಲೆರಡು ಸ್ಥಾನಗಳಲ್ಲಿದ್ದರೆ, ಇದೀಗ 7,036 ರನ್ ಪೂರೈಸುವುದರೊಂದಿಗೆ ಧೋನಿ 3ನೇ ಸ್ಥಾನಕ್ಕೇರಿದ್ದಾರೆ.
5 / 6
ಇನ್ನು ಈ ಪಂದ್ಯದಲ್ಲಿ ಒಂದು ಕ್ಯಾಚ್ ಹಿಡಿದಿದ್ದ ಧೋನಿ, ಟಿ20 ಕ್ರಿಕೆಟ್ನಲ್ಲಿ 300 ಬಲಿ ಪಡೆದ (ಕ್ಯಾಚ್+ಸ್ಟಂಪಿಂಗ್) ಮೊದಲ ವಿಕೆಟ್ ಕೀಪರ್ ಎಂಬ ವಿಶೇಷ ವಿಶ್ವ ದಾಖಲೆ ಬರೆದಿದ್ದಾರೆ.
6 / 6
ಒಟ್ಟಿನಲ್ಲಿ ತಮ್ಮ 42ನೇ ಹಿರಿ ವಯಸ್ಸಿನಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಮಹೇಂದ್ರ ಸಿಂಗ್ ಮೂರು ದಾಖಲೆಗಳನ್ನು ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಮುಂಬರುವ ಪಂದ್ಯಗಳ ಮೂಲಕ ಧೋನಿ ಹೆಸರಿಗೆ ಮತ್ತೊಂದಷ್ಟು ದಾಖಲೆಗಳು ಸೇರ್ಪಡೆಯಾಗುವ ನಿರೀಕ್ಷೆಯಿದೆ.