
ಟಿ20 ಕ್ರಿಕೆಟ್ನಲ್ಲಿ ಇದುವರೆಗೆ 13 ಸಾವಿರಕ್ಕೂ ಅಧಿಕ ಪಂದ್ಯಗಳನ್ನಾಡಲಾಗಿದೆ. ಅದರಲ್ಲಿ ಐಪಿಎಲ್ನಲ್ಲೇ 1200 ಕ್ಕೂ ಅಧಿಕ ಮ್ಯಾಚ್ಗಳು ನಡೆದಿವೆ. ಆದರೆ ಈ ಬಾರಿ ಇಂದೆಂದೂ ಕಂಡರಿಯದ, ಕೇಳರಿಯದ ರೀತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಪ್ರದರ್ಶನ ನೀಡಿದೆ. ಈ ಪ್ರದರ್ಶನದೊಂದಿಗೆ ವಿಶ್ವ ದಾಖಲೆಯನ್ನೂ ಸಹ ಬರೆದಿದೆ.

ಹೌದು, ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 20ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 234 ರನ್ ಕಲೆಹಾಕಿತು. ವಿಶೇಷ ಎಂದರೆ ಹೀಗೆ ಬೃಹತ್ ಮೊತ್ತ ಪೇರಿಸಿದರೂ ಮುಂಬೈ ಇಂಡಿಯನ್ಸ್ ಪರ ಒಬ್ಬನೇ ಒಬ್ಬ ಅರ್ಧಶತಕ ಬಾರಿಸಿರಲಿಲ್ಲ.

ರೋಹಿತ್ ಶರ್ಮಾ (49), ಇಶಾನ್ ಕಿಶನ್ (42), ಹಾರ್ದಿಕ್ ಪಾಂಡ್ಯ (39), ಟಿಮ್ ಡೇವಿಡ್ (45), ರೊಮೊರಿಯೊ ಶೆಫರ್ಡ್ (39) ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ 234 ರನ್ ಪೇರಿಸುವಲ್ಲಿ ಯಶಸ್ವಿಯಾಯಿತು. ಇದರೊಂದಿಗೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅರ್ಧಶತಕವಿಲ್ಲದೆ ಅತ್ಯಧಿಕ ರನ್ ಕಲೆಹಾಕಿದ ತಂಡವೆಂಬ ಕೀರ್ತಿ ಮುಂಬೈ ಇಂಡಿಯನ್ಸ್ ಪಾಲಾಗಿದೆ.

ಇನ್ನು ಈ ಪಂದ್ಯದಲ್ಲಿ 234 ರನ್ಗಳ ಟಾರ್ಗೆಟ್ ಅನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 205 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಮುಂಬೈ ಇಂಡಿಯನ್ಸ್ 29 ರನ್ಗಳ ಭರ್ಜರಿ ಜಯ ಸಾಧಿಸಿತು.

ಈ ಗೆಲುವಿನೊಂದಿಗೆ ಟಿ20 ಕ್ರಿಕೆಟ್ನಲ್ಲಿ 150 ಪಂದ್ಯಗಳಲ್ಲಿ ಜಯ ಸಾಧಿಸಿದ ವಿಶ್ವದ ಮೊದಲ ತಂಡವೆಂಬ ವಿಶ್ವ ದಾಖಲೆ ಕೂಡ ಮುಂಬೈ ಇಂಡಿಯನ್ಸ್ ಹೆಸರಿಗೆ ಸೇರ್ಪಡೆಯಾಗಿದೆ. ಹಾಗೆಯೇ ಐಪಿಎಲ್ನಲ್ಲಿ ಅತ್ಯಧಿಕ ಗೆಲುವು ದಾಖಲಿಸಿದ ತಂಡಗಳ ಪಟ್ಟಿಯಲ್ಲೂ ಅಗ್ರಸ್ಥಾನದಲ್ಲಿದೆ.

ಒಟ್ಟಿನಲ್ಲಿ ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿದ್ದ ಮುಂಬೈ ಇಂಡಿಯನ್ಸ್ ಇದೀಗ ಭರ್ಜರಿ ಗೆಲುವಿನೊಂದಿಗೆ ಕಂಬ್ಯಾಕ್ ಮಾಡಿದ್ದು, ಈ ಕಂಬ್ಯಾಕ್ನೊಂದಿಗೆ 2 ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿರುವುದು ವಿಶೇಷ.